ಸಾರಾಂಶ
ಹೊಸದುರ್ಗ: ತಾಲೂಕಿನ ಬೆಲಗೂರು ಗ್ರಾಮದಲ್ಲಿನ ವಸಿಷ್ಠಾಶ್ರಮದಲ್ಲಿ ಮಂಗಳವಾರ ಅವದೂತ ಸದ್ಗುರು ಬಿಂದುಮಾಧವ ಶರ್ಮಾ ಸ್ವಾಮೀಜಿ 78ನೇ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ವಸಿಷ್ಠಾಶ್ರಮದ ಅವದೂತ ಬಿಂದುಮಾಧವ ಶ್ರೀಗಳ ಅದಿಷ್ಠಾನ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಯಾಗಶಾಲೆಯಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷವಾಗಿ ಮಳೆಗಾಗಿ ಪ್ರಾರ್ಥಿಸಿ ಮೇದಾ ದಕ್ಷಿಣಮೂರ್ತಿ ಹೋಮ ಹಾಗೂ ಅವಹಂತೀ ಹೋಮ, ಮಂತ್ರ ಪಠಣೆ, ಪುರ್ಣಾಹುತಿ ಕಾರ್ಯಕ್ರಮಗಳು ನೆರವೆರಿದವು.
ಬಿಂದುಮಾಧವ ಶ್ರೀಗಳ ಅಧಿಷ್ಠಾನ ಮಂದಿರದಲ್ಲಿರುವ ಗುರುಗಳ ಸ್ಥಿರ ಹಾಗೂ ಚರ ಪಾದುಕೆಗಳಿಗೆ ರುದ್ರಾಭಿಷೇಕ, ಅಲಂಕಾರ ಪೂಜೆ, ಮಹಾ ನೈವೇದ್ಯ, ಅಷ್ಟೋತ್ತರ, ಮಹಾ ಮಂಗಳಾರತಿ ಮತ್ತಿತರ ವಿಷೇಶ ಕಾರ್ಯಕ್ರಮಗಳು ನೆರವೆರಿದವು. ಆಶ್ರಮದ ಮುಖ್ಯ ದೇವತೆ ಅಭಯಾಂಜನೇಯ ಸ್ವಾಮಿ ದೇವಾಲಯ ಹಾಗೂ ಅಭಯ ಗಣಪತಿ ಮಂದಿರದಲ್ಲೂ ವಿಶೇಷ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರದಿಯ ಸಾಲಿನಲ್ಲಿ ನಿಂತು ಅದಿಷ್ಠಾನ ಮಂದಿರದಲ್ಲಿ ಗುರುಗಳ ದರ್ಶನ ಪಡೆದರು.ಹೊಸದುರ್ಗದ ಸದ್ಗುರು ಆಶ್ರಮದ ಕಾಂತಾನಂದ ಸರಸ್ವತಿ ಸ್ವಾಮೀಜಿ, ಸಿಂದಗಿ ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮಿಜಿ, ಬ್ರಹ್ಮಾನಂದ ಸ್ವಾಮಿಜಿ ಕಾರ್ಯಕ್ರಮದ ಸಾನಿಧ್ಯವಹಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂದಿದ್ದರು. ಬಿಂದುಮಾಧವ ಶ್ರೀಗಳ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವಕ್ಕೆ ಆಶ್ರಮದ ಧರ್ಮಾಧಿಕಾರಿ ಗುರುದತ್ತ ಶರ್ಮಾ ಚಾಲನೆ ನೀಡಿದರು. ಅದಿಷ್ಠಾನ ಮಂದಿರವನ್ನು ವಿಶೇಷವಾಗಿ ಬಂಗಾರ ಬಣ್ಣದ ಅಲಂಕಾರಿಕ ಪರಿಕರಗಳು ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.