ಸಾರಾಂಶ
ಯಲ್ಲಾಪುರ: ತಾಲೂಕು ಜೀವ ವೈವಿಧ್ಯ ಸಮಿತಿಯಿಂದ ಮಾಡಲಾದ ನಾಲ್ಕು ವರ್ಷಗಳ ಯಲ್ಲಾಪುರ ತಾಲೂಕು ಜೀವವೈವಿಧ್ಯ ರಕ್ಷಣೆಯ ಸಮಗ್ರ ವರದಿಯ ಕೈಪಿಡಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಜಗತ್ ರಾಮ ಬೆಂಗಳೂರಿನ ಮಂಡಳಿಯ ಕಚೇರಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, ಯಲ್ಲಾಪುರ ತಾಲೂಕು ಸಮಿತಿಯು ಮಾದರಿಯಾದ ಕಾರ್ಯಕ್ರಮಗಳನ್ನು ಮಾಡಿದ ಬಗ್ಗೆ ತಿಳಿದು ಸಂತೋಷವಾಗಿದೆ. ಮಂಡಳಿಯಿಂದ ಇನ್ನೂ ಹೆಚ್ಚಿನ ಸಹಕಾರ ನೀಡುವುದಲ್ಲದೇ ಸಮಿತಿಯ ಕಾರ್ಯವೈಖರಿಯ ಬಗ್ಗೆ ಖುದ್ದು ಭೇಟಿ ನೀಡುತ್ತೇನೆ. ಉತ್ತರ ಕನ್ನಡ, ಶಿವಮೊಗ್ಗ, ಸಾಗರ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಪ್ರಾಕೃತಿಕ ಸಂಪತ್ತು ಮತ್ತು ಅಪರೂಪದ ಜೀವವೈವಿಧ್ಯಗಳಿದ್ದು, ಅವುಗಳನ್ನು ರಕ್ಷಿಸುವ ಹೊಣೆಯನ್ನು ನಮ್ಮ ಮಂಡಳಿಯಿಂದ ನಿಭಾಯಿಸೋಣ ಎಂದರು.ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಸಮಿತಿಯ ಕಾರ್ಯಗಳನ್ನು ಉತ್ತೇಜಿಸಲು ಮಂಡಳಿ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಬೇಕು. ರಾಜ್ಯಮಟ್ಟದ ಸಮಾವೇಶ ಕಾರ್ಯಾಗಾರಗಳನ್ನು ಸಂಯೋಜಿಸಿ ಜೀವವೈವಿಧ್ಯ ಸಂಗತಿಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮಾಡುವುದಕ್ಕೆ ಮುಂದಾಗುವಂತೆ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಮಂಡಳಿಯ ಸದಸ್ಯ ಕಾರ್ಯದರ್ಶಿಗಳಿಗೆ ಯಲ್ಲಾಪುರ ಬಿಎಂಸಿಯ ಪ್ರಗತಿ ವರದಿಯನ್ನು ಸದಸ್ಯರಾದ ಕೆ.ಎಸ್. ಭಟ್ಟ ಆನಗೋಡ, ನರಸಿಂಹ ಸಾತೊಡ್ಡಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿಯ ಸಂಪನ್ಮೂಲ ವ್ಯಕ್ತಿ ಶ್ರೀಪಾದ ಬಿಚ್ಚುಗತ್ತಿ, ಸಸ್ಯ ಶಾಸ್ತ್ರಜ್ಞ ಡಾ. ಕೇಶವ ಕೊರ್ಸೆ, ವೃಕ್ಷ ಲಕ್ಷ ಆಂದೋಲನದ ಪ್ರಮುಖರಾದ ವೆಂಕಟೇಶ ಕವಲಕೋಡ್ ಸಾಗರ, ಗಣಪತಿ ಕೆ. ಬಿಸ್ಲಕೊಪ್ಪ, ಜಿ.ವಿ. ಹೆಗಡೆ ಬಿಸ್ಲಕೊಪ್ಪ, ಮಂಡಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನಸಿಂಗ್ ಎಂ.ಜೆ., ಮಂಡಳಿಯ ತೋಟಗಾರಿಕಾ ಉಪನಿರ್ದೇಶಕಿ ಪವಿತ್ರಾ ಕೆ.ಎ., ತಾಂತ್ರಿಕ ಕಾರ್ಯನಿರ್ವಾಹಕ ಪ್ರಸನ್ನ, ಸಸ್ಯಶಾಸ್ತ್ರ ವಿಭಾಗದ ಸಹಾಯಕ ಸಂಶೋಧಕ ಡಾ. ಜವಾಹರ ರವೀಂದ್ರ, ಕಾರ್ಯನಿರ್ವಾಹಕ ಸಹಾಯಕ ಕಾರ್ತಿಕ್ ಎಸ್.ಎನ್. ಸೇರಿದಂತೆ ವಿವಿಧ ಸ್ತರದ ಅಧಿಕಾರಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))