ಮನೆ ಮನೆಗಳಲ್ಲಿ ಜೈವಿಕ ಇಂಧನ ಉತ್ಪಾದನೆ ಸಾಧ್ಯ: ಕೆ.ವಿ.ಸುಬ್ರಹ್ಮಣ್ಯ

| Published : Aug 29 2024, 12:50 AM IST

ಮನೆ ಮನೆಗಳಲ್ಲಿ ಜೈವಿಕ ಇಂಧನ ಉತ್ಪಾದನೆ ಸಾಧ್ಯ: ಕೆ.ವಿ.ಸುಬ್ರಹ್ಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜೈವಿಕ‌ ಇಂಧನ ಹೆಚ್ಚಿಸುವ ಪೂರಕ ಗಿಡಗಳನ್ನು ಪೋಷಿಸುವ ಮೂಲಕ ಮನೆ ಮನೆಗಳಲ್ಲಿ ಜೈವಿಕ ಇಂಧನ ಉತ್ಪಾದನೆ ಸಾಧ್ಯ ಎಂದು ಸಾಮಾಜಿಕ‌ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ರಾಜ್ಯ ಜೈವಿಕ‌ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಸಹಯೋಗದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೈವಿಕ ಇಂಧನದ ಉತ್ಪಾದನೆ ಅವಶ್ಯಕತೆ ಕುರಿತಾಗಿ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಒಲವು ಮೂಡಬೇಕಿದೆ.‌ ಜೈವಿಕ‌ ಇಂಧನ ಉತ್ಪಾದಿಸಬಲ್ಲ ಅದೆಷ್ಟೋ ಅಮೂಲ್ಯವಾದ ಮರಗಳ ಬೀಜಗಳು ವ್ಯರ್ಥವಾಗುತ್ತಿದೆ. ಗ್ರಾಮೀಣ ಪ್ರದೇಶದ ಅಧಿಕಾರಿಗಳು ಅಂತಹ ಬೀಜಗಳನ್ನು ಸಂಗ್ರಹಿಸಿ ಇಂಧನವಾಗಿ ಪರಿವರ್ತಿಸಬಲ್ಲ ಕಾರ್ಯ ವಿಧಾನವನ್ನು ಹಳ್ಳಿಗರಿಗೆ ಕಲಿಸಿ ಕೊಡಬೇಕಿದೆ ಎಂದರು.

ಇಂತಹ ಕಾರ್ಯ ವಿಧಾನಗಳು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸ್ವಯಂ ಉದ್ಯೋಗಾವಕಾಶ ಕಲ್ಪಿಸಲಿದೆ. ಕೃಷಿ ಚಟುವಟಿಕೆಗಳ ನಡುವೆ ಜೈವಿಕ ಇಂಧನದ ಪೂರಕ ಗಿಡಗಳನ್ನು ನೆಟ್ಟು, ಪೋಷಿಸುವತ್ತ ಗಮನ ವಹಿಸಿಸುವಂತೆ ಪ್ರೇರಣೆ ನೀಡುವ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಿದೆ ಎಂದು ಹೇಳಿದರು.

ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಮಾತನಾಡಿ, ಆಧುನಿಕ ಬದುಕಿನಲ್ಲಿ ಕೆಲವೊಂದು ಪರಿಸರ ಸ್ನೇಹಿ ಜೀವನ ಪದ್ಧತಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.‌ ಈ ಮೂಲಕ ಪರಿಸರದ ಅಮೂಲ್ಯ ಅಂಶಗಳು ಕಣ್ಮರೆಯಾಗಬಹುದು ಎಂಬ ಆತಂಕವನ್ನು ಒಂದಿಷ್ಟು ಕಾಲ ದೂರ ಮಾಡಬಹುದು ಎಂದರು.

ಈ ವರ್ಷ ಕಾಲೇಜಿನಲ್ಲಿ ನಾಲ್ಕು ಪರಿಸರ ಸ್ನೇಹಿ‌ ಧ್ಯೇಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಕಾಗದ ರಹಿತ ಕಡತಗಳ ನಿರ್ವಹಣೆ, ಆನ್ಲೈನ್ ಬ್ಯಾಂಕಿಂಗ್, ಕಾಲೇಜಿಗೆ ಬೇಕಾಗುವಷ್ಟು ಸ್ವಯಂ ವಿದ್ಯುತ್ ಉತ್ಪಾದನೆ, ಮಳೆ‌ ನೀರಿನ ಸಂಗ್ರಹಣೆ ಮುಂತಾದ ಅನೇಕ ಉದ್ದೇಶಗಳು ಕೆಲವೇ ತಿಂಗಳಲ್ಲಿ ಸಾಕಾರಗೊಳ್ಳಲಿವೆ ಎಂದು ಹೇಳಿದರು.

ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಂಚಾಲಕ ಡಾ. ಚೇತನ್.ಎಸ್.ಜಿ ಮಾತನಾಡಿ, ಖ್ಯಾತ ವಿಜ್ಞಾನಿ ರುಡಾಲ್ಫ್ ಡಿಸೇಲ್ ಅವರು ಡೀಸೆಲ್ ಎಂಜಿನ್ ಒಂದನ್ನು ಕಂಡುಹಿಡಿದು ಶೇಂಗಾ ಎಣ್ಣೆಯನ್ನು ಬಳಸಿ ಚಾಲು ಮಾಡಿದ ದಿನವನ್ನು ಜೈವಿಕ ಇಂಧನ ದಿನವಾಗಿ ಆಚರಿಸಲಾಗುತ್ತಿದೆ ಎಂದರು.

2040 ರ ವೇಳೆಗೆ ಫಾಸಿಲ್ ಫ್ಯೂಯಲ್ ನಶಿಸಿ ಹೋಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು, ಪರ್ಯಾಯ ಇಂಧನ ವ್ಯವಸ್ಥೆಯನ್ನು ರೂಪಿಸುವಲ್ಲಿ ನವೀಕರಿಸಬಹುದಾದ ಶಕ್ತಿ ಮೂಲಗಳು ಅತಿ ಪ್ರಮುಖ ಸ್ಥಾನ ಪಡೆದಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಹ ಸಂಚಾಲಕ ಡಾ. ರವಿಕುಮಾರ್ ಬಿ.ಎನ್, ಎಸ್.ಟಿ.ಪಿ ವಿಭಾಗದ ಯೋಜನಾ ಸಹಾಯಕಿ ರಶ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಪಿಡಿಒಗಳು, ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೈವಿಕ ಇಂಧನವನ್ನು ತಯಾರಿಸುವ ಕಾರ್ಯವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.