ಸಾರಾಂಶ
ಸಂಪನ್ಮೂಲ ವ್ಯಕ್ತಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವೈಜ್ಞಾನಿಕಾಧಿಕಾರಿ ರಾಮಕೃಷ್ಣ ಮರಾಠಿ ಅವರು ಸಸ್ಯ ಪ್ರಪಂಚದ ವಿಶೇಷತೆಗಳನ್ನು ವಿವರಿಸಿ, ಔಷಧೀಯ ಸಸ್ಯಗಳ ಪರಿಚಯ ಮತ್ತು ಮಹತ್ವವನ್ನು ತಿಳಿಸಿದರು. ಡಾ. ರಾಮ್ ಭಟ್ ಜೈವಿಕ ತಂತ್ರಜ್ಞಾನದ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕರಿಗೆ ಜೀವಶಾಸ್ತ್ರದ ಬಗ್ಗೆ ಒಂದು ದಿನದ ಕಾರ್ಯಾಗಾರ ಪ್ರಾತ್ಯಕ್ಷಿಕೆ ಹಾಗೂ ಪ್ರಯೋಗಗಳೊಂದಿಗೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಆಳ್ವಾಸ್ ಕಾಲೇಜಿನ ಆಕಾಡೆಮಿಕ್ ಡೀನ್ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಡಾ. ರಾಮ ಭಟ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಕೃತಿಯ ಹಾಗೂ ಪರಿಸರದ ಜೀವರಾಶಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಹಾಗೂ ಸುಲಭ ಪ್ರಯೋಗಗಳಿಂದ ಜೈವಿಕ ತಂತ್ರಜ್ಞಾನದ ಲಾಭ ಹಾಗೂ ಉಪಯೋಗಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಮಾತನಾಡಿ, ನಮ್ಮ ಸಸ್ಯ ಸಂಪತ್ತು ಹಾಗೂ ಜೀವ ವೈವಿಧ್ಯತೆಗಳ ಅರಿವನ್ನು ಪ್ರೌಢಶಾಲೆ ಮಟ್ಟದಲ್ಲಿ ಮೂಡಿಸುವ ಪ್ರಯತ್ನ ಮಾಡಿದರೆ ಪ್ರಕೃತಿ ಪ್ರೇಮ ವಿದ್ಯಾರ್ಥಿಗಳಲ್ಲಿ ತಾನಾಗಿ ಮೂಡಲಿದೆ. ಆಹಾರ ಸಮಸ್ಯೆ, ಪ್ರಕೃತಿ ದತ್ತ ಸಂಪತ್ತಿನ ವಿನಾಶಕ್ಕೆ ಪರಿಹಾರೋಪಾಯಗಳನ್ನು ಕಂಡುಹಿಡಿಯುವ ಭಾರ ನಮ್ಮ ಮೇಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವೈಜ್ಞಾನಿಕಾಧಿಕಾರಿ ರಾಮಕೃಷ್ಣ ಮರಾಠಿ ಅವರು ಸಸ್ಯ ಪ್ರಪಂಚದ ವಿಶೇಷತೆಗಳನ್ನು ವಿವರಿಸಿ, ಔಷಧೀಯ ಸಸ್ಯಗಳ ಪರಿಚಯ ಮತ್ತು ಮಹತ್ವವನ್ನು ತಿಳಿಸಿದರು. ಡಾ. ರಾಮ್ ಭಟ್ ಜೈವಿಕ ತಂತ್ರಜ್ಞಾನದ ಮಾಹಿತಿ ನೀಡಿದರು. ಡಾ. ದಯಾನಂದ ಪೈ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಜೆನೆಟಿಕ್ ಎಂಜಿನಿಯರಿಂಗ್ ಬಗ್ಗೆ ವಿವರಿಸಿದರು.ಕ್ಯುರೇಟರ್ ಜಗನ್ನಾಥ್ ನಿರೂಪಿಸಿದರು. ಇನ್ನೊವೇಶನ್ ಹಬ್ ಮೆಂಟರ್ ಹೇಮಂತ್ ಸ್ವಾಗತಿಸಿದರು. ವಿಘ್ನೇಶ್ ಭಟ್ ವಂದಿಸಿದರು.