ಬಯೋ ಮಾಸ್‌ ಬಾಯ್ಲರ್‌ ಸ್ಫೋಟ: ಅಣಕು ಪ್ರದರ್ಶಿಸಿ ರಕ್ಷಣೆ

| Published : May 17 2025, 01:47 AM IST

ಸಾರಾಂಶ

ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾತ್ಮಕ ಅಣಕು ಪ್ರದರ್ಶನ ಆಟೋ ನಗರದ ಹಿಂಡಾಲ್ಕೋ ಕಾರ್ಖಾನೆಯಲ್ಲಿ ಶುಕ್ರವಾರ ಜರುಗಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾತ್ಮಕ ಅಣಕು ಪ್ರದರ್ಶನ ಆಟೋ ನಗರದ ಹಿಂಡಾಲ್ಕೋ ಕಾರ್ಖಾನೆಯಲ್ಲಿ ಶುಕ್ರವಾರ ಜರುಗಿತು.

ಫ್ಯಾಕ್ಟರಿಗಳಲ್ಲಿ ಬಯೋ ಮಾಸ್ ಬಾಯ್ಲರ್ ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನವನ್ನು ಕೈಗೊಳ್ಳಲಾಯಿತು.ಬೆಳಗಾವಿ ತಹಶೀಲ್ದಾರ ಬಸವರಾಜ ನಾಗರಾಳ ಹಾಗೂ ಅಗ್ನಿಶಾಮಕ ದಳದ ಅಧೀಕ್ಷಕ ಶಶಿಧರ್ ನೀಲಗಾರ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೋಡ ಇವರ ಸಮ್ಮುಖದಲ್ಲಿ ಅಣಕು ಪ್ರದರ್ಶನ ಜರುಗಿತು. ಅವಘಡ ಸಂಭವಿಸಿದ ಕುರಿತು ಮಾಹಿತಿ ಬಂದ ತಕ್ಷಣವೇ ಸಂಬಂಧಿಸಿದ ಎಲ್ಲಾ ಇಲಾಖೆಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅವಘಡವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಂಡರು.

ಸನ್ನಿವೇಶದಲ್ಲಿ ಅತೀ ಹೆಚ್ಚು ಗ್ಯಾಸ್ ಒತ್ತಡದ ಸಂದರ್ಭದಲ್ಲಿ ಬಯೋ ಮಾಸ್ ಬಾಯ್ಲರ್ ಬೆಂಕಿಯಿಂದಾಗಿ ಅವಘಡ ಸಂಭವಿಸಿತು. ಒಬ್ಬ ಕಾರ್ಮಿಕನ ಸಾವು ಸಂಭವಿಸಿದ್ದು, ಅವಘಡದಲ್ಲಿ ಗಾಯಗೊಂಡಿರುವ 24 ಕಾರ್ಮಿಕರನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳಾಂತರಿಸಿ, ಮೆಡಿಕಲ್ ಪೋಸ್ಟ್‌ಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸನ್ನಿವೇಶವನ್ನು ಅಣಕು ಪ್ರದರ್ಶನದಲ್ಲಿ ತೆಗೆದುಕೊಂಡು ಅರಿವು ಮೂಡಿಸಲಾಯಿತು.ಅದೇ ರೀತಿ ಹೆಚ್ಚು ಗಾಯಗೊಂಡಿರುವ 10 ಗಾಯಾಳುಗಳನ್ನು ಹಾಗೂ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿರುವ 5 ಜನ ಗಾಯಾಳುಗಳನ್ನು ರಕ್ಷಿಸಿ, ಆ್ಯಂಬುಲೆನ್ಸ್ ಮೂಲಕ ವೈದ್ಯಕೀಯ ತುರ್ತು ಚಿಕಿತ್ಸೆ ಒದಗಿಸಲು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಎಸ್‌ಡಿಆರ್‌ಎಫ್ ಉಪ ಸಮಾಧಿಷ್ಟ್ರರಾದ ಶರಣಬಸವ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ್ ಭೋವಿ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಹಿಂಡಾಲ್ಕೋ ಕಾರ್ಖಾನೆಯ 8 ಸಿಬ್ಬಂದಿ, 11 ಅಗ್ನಿಶಾಮಕದಳದ ಸಿಬ್ಬಂದಿ, 16 ಗೃಹರಕ್ಷಕ ದಳ, 20 ವೈದ್ಯಕೀಯ ಸಿಬ್ಬಂದಿ, ಅಣಕು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.