ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ಕುರೆಕುಪ್ಪದಲ್ಲಿರುವ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿನ ಕೋಳಿ ಫಾರಂನಲ್ಲಿನ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ಮತ್ತು ಕೋಳಿ ಜ್ವರದ ಹಿನ್ನೆಲೆ ಸುಮಾರು ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತ ಕಾರಣ, ತಾತ್ಕಾಲಿಕವಾಗಿ ಕೋಳಿ ಫಾರಂ ಅನ್ನು ಮುಚ್ಚಲಾಗಿದೆ.ಇಲ್ಲಿನ ಫಾರಂನಲ್ಲಿ ಅಸೀಲ್ ಹಾಗೂ ಕಾವೇರಿ ತಳಿಯ ನಾಟಿ ಕೋಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಇಲ್ಲಿ ಸುಮಾರು ೨೪೦೦ ಕೋಳಿಗಳಿದ್ದವು. ಕೆಲ ದಿನಗಳಿಂದ ಕೋಳಿಗಳು ಸಾವನ್ನಪ್ಪುತ್ತಿದ್ದ ಹಿನ್ನೆಲೆ ಕೋಳಿಗಳ ಸ್ಯಾಂಪಲ್ ಅನ್ನು ಬೆಂಗಳೂರಿಗೆ ಮತ್ತು ಅಲ್ಲಿಂದ ಭೂಪಾಲ್‌ನಲ್ಲಿನ ಲ್ಯಾಬ್‌ಗೆ ಕಳುಹಿಸಿಕೊಡಲಾಗಿತ್ತು. ಇಲ್ಲಿನ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟ ಹಿನ್ನೆಲೆ ಫಾರಂನಲ್ಲಿ ಉಳಿದಿದ್ದ ಕೋಳಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗಿದೆ.
ಈ ಕುರಿತು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಹನುಮಂತನಾಯ್ಕ ಕಾರಬಾರಿ ಮಾತನಾಡಿ, ಕುರೆಕುಪ್ಪ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆ ಫಾರಂ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಕಾರ್ಯಕೈಗೊಳ್ಳಲಾಗಿದೆ. ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಎಲ್ಲಿಯಾದರು ಕೋಳಿಗಳು ಸತ್ತರೆ, ಕೂಡಲೆ ಪಶು ವೈದ್ಯಾಧಿಕಾರಿಗಳಿಗೆ ತಿಳಿಸಬೇಕು ಮತ್ತು ಅವುಗಳನ್ನು ಪರೀಕ್ಷೆಗೆ ಒಳಪಡಿಸಿ, ವೈಜ್ಞಾನಿಕವಾಗಿ ಹೂಳಬೇಕು ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಕೋಳಿ, ಮೊಟ್ಟೆ ಮಾರಾಟ ನಿಷೇಧ:
ಕುರೆಕುಪ್ಪ ಪುರಸಭೆಯ ಅಧ್ಯಕ್ಷ ಕಲ್ಲಗುಡೆಪ್ಪ ಕನ್ನಡಪ್ರಭದೊಂದಿಗೆ ಮಾತನಾಡಿ, ಕುರೆಕುಪ್ಪ ಪುರಸಭೆ ವ್ಯಾಪ್ತಿಯಲ್ಲಿನ ಕುರೆಕುಪ್ಪ ಫಾರಂನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕುರೆಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಈ ಕುರಿತು ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಮಾಡುವ ಅಂಗಡಿ, ಡಾಬಾಗಳಿಗೆ ನೋಟಿಸ್ ನೀಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿಯ ಜನತೆಯು ಮುಂದಿನ ಆದೇಶದವರೆಗೆ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸುವುದನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಮನವಿ ಮಾಡಲಾಗಿದೆ. ಈ ಕುರಿತು ಜನತೆಯಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಕ್ಕಿ ಜ್ವರ ಹಿನ್ನೆಲೆ ಕೋಳಿ ಮಾಂಸ ದರ ಕುಸಿತಕನ್ನಡಪ್ರಭ ವಾರ್ತೆ ಬಳ್ಳಾರಿ
ಬಳ್ಳಾರಿ, ರಾಯಚೂರಿನಲ್ಲಿ ಹಕ್ಕಿ ಜ್ವರ ಪತ್ತೆ ಹಿನ್ನೆಲೆಯಲ್ಲಿ ಆಂಧ್ರ ಗಡಿ ಭಾಗದ ನಗರಗಳಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ದರ ಕುಸಿತವಾಗಿದೆ.ಇದರಿಂದಾಗಿ ಕೋಳಿ ಮಾಂಸ ಮೊಟ್ಟೆ ತಿನ್ನಲು ಹಿಂದೇಟು ಜನರು ಹಾಕುತ್ತಿದ್ದಾರೆ. ಒಂದು ಕೆಜಿ ಕೋಳಿ ಮಾಂಸಕ್ಕೆ ಈ ಹಿಂದೆ ₹೧೦೦ ಇತ್ತು. ಇದೀಗ ₹೮೦ಕ್ಕೆ ಒಂದು ಕೆಜಿ ಕೋಳಿ ಮಾಂಸ ಇಳಿಕೆಯಾಗಿದ್ದು, ಕೆಜಿಗೆ ₹೨೦ ರೂಪಾಯಿ ದರ ಕುಸಿತವಾಗಿದೆ. ಕೋಳಿ ಮೊಟ್ಟೆಯ ದರವೂ ಇಳಿಕೆಯಾಗಿದೆ. ಈ ಹಿಂದೆ ಒಂದು ಟ್ರೇ ಮೊಟ್ಟೆಗೆ ₹೧೫೦ ಇತ್ತು. ಈಗ ಒಂದು ಟ್ರೇ ಮೊಟ್ಟೆಗೆ ₹೧೩೦ ಇದೆ. ಈಗ ಒಂದು ಟ್ರೇ ಮೊಟ್ಟೆಗೆ ₹ 20 ಇಳಿಕೆಯಾಗಿದೆ. ಬಳ್ಳಾರಿಯಲ್ಲಿ ೨೪೦೦ ಕೋಳಿಗಳು ಹಕ್ಕಿ ಜ್ವರದಿಂದ ಸಾವಿಗೀಡಾಗಿವೆ. ರಾಯಚೂರಿನಲ್ಲೂ ಸಾವಿರಾರು ಕೋಳಿ ಸಾವಾಗಿದೆ. ಹಾಗಾಗಿ ಆಂಧ್ರದಿಂದ ಕೋಳಿಗಳ ಆಮದನ್ನು ಬಳ್ಳಾರಿ ಕೋಳಿ ಫಾರಂ ಮಾಲೀಕರು ಸ್ಥಗಿತಗೊಳಿಸಿದ್ದಾರೆ.