ಅವೈಜ್ಞಾನಿಕವಾಗಿ ಅಳವಡಿಸಿದ ಬಲೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪಕ್ಷಿಗಳು
KannadaprabhaNewsNetwork | Published : Oct 12 2023, 12:01 AM IST
ಅವೈಜ್ಞಾನಿಕವಾಗಿ ಅಳವಡಿಸಿದ ಬಲೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪಕ್ಷಿಗಳು
ಸಾರಾಂಶ
ಹಣ್ಣಿನ ರಕ್ಷಣೆಗಾಗಿ ಅವೈಜ್ಞಾನಿಕವಾಗಿ ಅಳವಡಿಸಿದ ಬಲೆಯಿಂದಾಗಿ ದಿನ ನಿತ್ಯ ನೂರಾರು ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರ ವಲಯದಿಂದ ದೂರುಗಳು ಕೇಳಿ ಬಂದಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯತೆ ಹೆಚ್ಚಿದೆ.
ವಿಶೇಷ ವರದಿ ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಹಣ್ಣಿನ ರಕ್ಷಣೆಗಾಗಿ ಅವೈಜ್ಞಾನಿಕವಾಗಿ ಅಳವಡಿಸಿದ ಬಲೆಯಿಂದಾಗಿ ದಿನ ನಿತ್ಯ ನೂರಾರು ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರ ವಲಯದಿಂದ ದೂರುಗಳು ಕೇಳಿ ಬಂದಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯತೆ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಕೇರಳ ಮೂಲದ ಉದ್ಯಮ ಸ್ವರೂಪದ ಕೃಷಿಕರು ಹೆಕ್ಟೇರುಗಟ್ಟಲೆ ಭೂಮಿ ಖರೀದಿಸಿ ಅಲ್ಲಿ ರಂಬೂಟನ್ ನಂತಹ ವಿದೇಶಗಳಿಗೆ ರಫ್ತಾಗುವ ಹಣ್ಣಿನ ಬೆಳೆಯನ್ನು ಬೆಳೆಸುತ್ತಿದ್ದಾರೆ. ಈ ಹಣ್ಣಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಕಿ ಲೋ ಒಂದಕ್ಕೆ 2೦೦ ರಿಂದ 300 ರು. ಬೆಲೆ ಇರುತ್ತಿದ್ದು, ತತ್ ಪರಿಣಾಮ ಇದೀಗ ಸ್ಥಳೀಯ ಕೃಷಿಕರೂ ಈ ಬೆಳೆಯನ್ನು ಬೆಳೆಸಲು ಮುಂದಾಗಿದ್ದು, ಕೈಗೆಟಕುವ ಬೆಲೆಗೆ ಹಣ್ಣು ದೊರೆಯಲಾರಂಭಿಸಿದೆ. ಉದ್ಯಮ ಸ್ವರೂಪದಲ್ಲಿ ರಂಬೂಟನ್ ಹಣ್ಣು ಬೆಳೆಯುವ ಮಂದಿ ಹೊರ ರಾಜ್ಯಗಳಲ್ಲಿ ನೆಲೆಸಿದ್ದು, ಇಲ್ಲಿ ಕಾರ್ಮಿಕರನ್ನು ನಿಯುಕ್ತಿಗೊಳಿಸಿರುತ್ತಾರೆ. ಇಂತಹ ಬೃಹತ್ ಪ್ರಮಾಣದ ಕೃಷಿಯನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲದ ಗ್ರಾಮದ ನೇಜಿಗಾರ್ ಬಳಿ, ಹಾಗೂ ಬಾರ್ಯ ಗ್ರಾಮದ ಪಿಲಿಗೂಡು ಬಳಿ ಮಾಡಲಾಗುತ್ತಿದೆ. ಹಣ್ಣು ಬೆಳೆಯುವ ಜಾಗದಲ್ಲಿ ವಿದ್ಯುತ್ ಪ್ರವಹಿಸುವ ತಂತಿಗಳನ್ನು ಅಳವಡಿಸಿ ಜನರು ಯಾರೂ ಒಳಪ್ರವೇಶಿಸಿದಂತೆ ನೋಡಿಕೊಂಡಿದ್ದು, ಬೆಳೆ ಕಾಯಿಯಾಗಿ ಹಣ್ಣಾಗುವ ಸಂಧರ್ಭದಲ್ಲಿ ಪಕ್ಷಿಗಳು ಲಗ್ಗೆ ಇರಿಸದಂತೆ ಹಣ್ಣುಗಳನ್ನು ರಕ್ಷಿಸಲು ಗಿಡಕ್ಕೆ ಬಲೆಯ ಅಳವಡಿಸುವ ಮೂಲಕ ಪಕ್ಷಿಗಳಿಂದ ರಕ್ಷಿಸಲಾಗುತ್ತಿತ್ತು. ಆದರೆ ಈ ಬಾರಿ ಹಣ್ಣಿನ ಗಿಡಕ್ಕೆ ಬಲೆ ಅಳವಡಿಸುವ ಬದಲು ಇಡೀ ತೋಟಕ್ಕೆ ಬೃಹತ್ ಗಾತ್ರದ ಕಂಬ ಅಳವಡಿಸಿ, ಅದಕ್ಕೆ ಬಲೆ ಳವಡಿಸಿದ್ದು, ವಾಯು ಮಾರ್ಗದ ಮೂಲಕವೂ ಪಕ್ಷಿಗಳು ಹಾರಾಡಿ ಬರಬಾರದಂತೆ ತಡೆಯೊಡ್ಡಿದ್ದಾರೆ. ಇದರಿಂದಾಗಿ ಅಳವಡಿಸಲಾದ ಬಲೆಯ ಬಗ್ಗೆ ಅರಿವಿಲ್ಲದ ಪಕ್ಷಿಗಳು ಈ ಪ್ರದೇಶದಲ್ಲಿ ಹಾರಾಡಿಕೊಂಡು ಬರುವಾಗ ಬಲೆಗೆ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿರುವ ದೃಶ್ಯ ಮನ ಕಲಕುವಂತಿರುತ್ತದೆ. ಈ ಬಗ್ಗೆ ಪಕ್ಷಿಗಳನ್ನು ರಕ್ಷಿಸಲು ತೊಟದ ಮಾಲಕರಲ್ಲಿ ಯಾ ಸಿಬ್ಬಂದಿಗಳಲ್ಲಿ ತಿಳಿಸಲು ಮುಂದಾದರೂ ತೋಟಕ್ಕೆ ಅಳವಡಿಸಲಾದ ವಿದ್ಯುತ್ ತಂತಿ ಬೇಲಿ ಹಾಗೂ ವಿದ್ಯುತ್ ಪ್ರವಹಿಸುವ ಗೇಟನ್ನು ತೆರೆಯಲು ಯಾರೂ ಮುಂದಾಗುತ್ತಿಲ್ಲ. ತಾವು ಬೆಳೆಯುವ ಹಣ್ಣಿನ ರಕ್ಷಣೆಯನ್ನು ಮಾಡುವ ಕರ್ತವ್ಯ ಯಾ ಹಕ್ಕು ಕೃಷಿಕರದ್ದೆ ಆಗಿದ್ದರೂ ವಾಯು ಮಾರ್ಗದಲ್ಲಿ ಸಂಚರಿಸುವ ಪಕ್ಷಿಗಳ ಜೀವಿಸುವ ಹಕ್ಕನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ ಎನ್ನುವುದನ್ನು ಕೃಷಿಕರು ಅರಿತುಕೊಳ್ಳಬೇಕಾಗಿದೆ. ಬಲೆ ಅಳವಡಿಸಲಾದ ಕೃಷಿಕರಿಗೆ ನೋಟೀಸು ನೀಡಲಾಗಿದೆ: ವಲಯ ಅರಣ್ಯಾಧಿಕಾರಿ ಪಕ್ಷಿಗಳ ಜೀವ ಹರಣಕ್ಕೆ ಕಾರಣವಾಗಿರುವ ಬಲೆ ಅಳವಡಿಸಿರುವ ಪ್ರಕರಣದ ಬಗ್ಗೆ ಸ್ಪಷ್ಠನೆ ಬಯಸಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ರವರನ್ನು ಸಂಪರ್ಕಿಸಿದಾಗ, ಪಕ್ಷಿಗಳ ಜೀವಕ್ಕೆ ತೊಂದರೆಯೊಡ್ಡುವ ರೀತಿಯಲ್ಲಿ ಬಲೆ ಅಳವಡಿಸಲಾದ ಬಗ್ಗೆ ಸಾರ್ವಜನಿಕರ ದೂರಿನ ಬಗ್ಗೆ ಇಲಾಖೆ ತ್ವರಿತ ಕ್ರಮ ಕೈಗೊಂಡಿದ್ದು, ಸಂಬಂಧಿಸಿದ ಕೃಷಿಕರಿಗೆ ನೋಟೀಸು ಜಾರಿ ಮಾಡಲಾಗಿದೆ. ಮತ್ತು ಅಳವಡಿಸಲಾದ ಎಲ್ಲಾ ಬಲೆಯನ್ನು ತೆರವು ಮಾಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪಕ್ಷಿಗಳ ಬದುಕು ಕಸಿಯುವ ಅನುಕೂಲ ಸಿಂಧು ನಡೆ ಸರಿಯಲ್ಲ. ಹಿಂದೆಲ್ಲಾ ರಂಬೂಟನ್ ಹಣ್ಣು ಬಿಡುತ್ತಿದ್ದ ಗಿಡಗಳಿಗೆ ಮಾತ್ರ ಬಲೆಯನ್ನು ಹಾಕಿ ಹಣ್ಣಿನ ರಕ್ಷಣೆ ಮಾಡುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಇಡೀ ತೋಟದ ಗಡಿಗೆ ಬಲೆಯನ್ನು ಎತ್ತರದಲ್ಲಿ ಅಳವಡಿಸುವ ಅನುಕೂಲಕರ ನಡೆಯನ್ನು ಅನುಷ್ಠಾನಿಸಿದ್ದರಿಂದ ಪಕ್ಷಿ ಸಂಕುಲಗಳು ಬಲೆಗೆ ಸಿಲುಕಿ ಸಾಯುವ ದುರಂತಗಳು ನಡೆಯುತ್ತಿದೆ. ಇದರ ದುಷ್ಪರಿಣಾಮಗಳು ಮನವರಿಕೆಯಾಗಿದ್ದರೂ ಸ್ವಾರ್ಥ ಸಾಧನೆಗಾಗಿ ಇದನ್ನು ಅಳವಡಿಸಿರುವುದು ಸರಿಯಲ್ಲ. ಸಂಬಂಧಪಟ್ಟ ಇಲಾಖೆ ಇಂತಹ ಕೃತ್ಯಗಳ ವಿರುದ್ದ ಕಠಿಣ ನಿಲುವು ತೆಗೆದುಕೊಳ್ಳಬೇಕು. ಸುಜಾತ ಕೃಷ್ಣ ಆಚಾರ್ಯು, ಹಿರಿಯ ಸಾಮಾಜಿಕ ಕಾರ್ಯಕರ್ತೆ.