ಕರಡಹಳ್ಳಿ ಸೀತಾರಾಮು
ಕನ್ನಡಪ್ರಭ ವಾರ್ತೆ ನಾಗಮಂಗಲಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಉದ್ಭವ ಮೂರ್ತಿ ಶ್ರೀಕಾಟಣ್ಣಸ್ವಾಮಿ ಏಳು ಕೂಟದ ಬೀರೇದೇವರುಗಳ ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಬೀರೇಶ್ವರಪುರ ಗ್ರಾಮವನ್ನು ನವ ವಧುವಿನಂತೆ ಸಿಂಗಾರಗೊಳಿಸಿ ಏಳುಕೂಟದ ದೇವರುಗಳು ಹಾಗೂ ಭಕ್ತಾದಿಗಳನ್ನು ಬರಮಾಡಿಕೊಳ್ಳಲು ಸಕಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ.
44 ವರ್ಷಗಳ ನಂತರ ಗ್ರಾಮದಲ್ಲಿ ಶ್ರೀಕಾಟಣ್ಣಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಮನೆಗಳು ಮತ್ತು ದೇವಸ್ಥಾನಗಳಿಗೆ ಸುಣ್ಣ ಬಣ್ಣ ಮಾಡಿ ಹೊಸ ಮೆರಗು ನೀಡಲಾಗಿದೆ. ಇಡೀ ಗ್ರಾಮವು ಹಬ್ಬದ ಸಂಭ್ರಮದಿಂದ ಕೂಡಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸ್ವಾಗತ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ. ತಳಿರು ತೋರಣ ವಿದ್ಯುತ್ ದೀಪಾಲಂಕಾರದಿಂದ ಇಡೀ ಗ್ರಾಮವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ.ಕಾಟಣ್ಣಸ್ವಾಮಿಗೆ ದೇವಸ್ಥಾನವಿಲ್ಲ:
ಉದ್ಭವ ಮೂರ್ತಿ ಕಾಟಣ್ಣಸ್ವಾಮಿಗೆ ದೇವಸ್ಥಾನವಿಲ್ಲ. ಗ್ರಾಮದ ಶ್ರೀದೊಡ್ಡಯ್ಯಸ್ವಾಮಿ ದೇವಸ್ಥಾನದ ಹಿಂಭಾಗದ ಆವರಣದಲ್ಲಿ ಕಾಟಣ್ಣಸ್ವಾಮಿ ನೆಲೆಸಿದ್ದಾರೆನ್ನುವ ಜಾಗದಲ್ಲಿ ತೆರೆದ ವೇದಿಕೆ ಮಾದರಿಯಲ್ಲಿ ಕಾಂಕ್ರಿಟ್ ನೆಲಹಾಸು ನಿರ್ಮಿಸಲಾಗಿದೆ. ಉದ್ಭವ ಮೂರ್ತಿ ಇರುವ ಜಾಗಕ್ಕೆ ಪೂಜೆ ಸಲ್ಲಿಸಿ ಮೂರು ಕೊಳಗದಷ್ಟು ಕಣಗಲೆ ಹೂವುಗಳನ್ನು ಸುರಿಯುತ್ತಿದ್ದಂತೆ ಹೂವಿನ ನಡುವೆ ಕಾಟಣ್ಣಸ್ವಾಮಿ ದೇವರು ಉದ್ಭವಗೊಂಡು ಮೇಲೆದ್ದು ಬರಲಿದೆ ಎಂಬುದು ಗ್ರಾಮದ ಹಿರಿಯರ ನಂಬಿಕೆ.
3 ಲಕ್ಷ ರು.ವೆಚ್ಚದ ಹಸಿರು ಚಪ್ಪರ:
ಕಾಟಣ್ಣಸ್ವಾಮಿ ನೆಲೆಸಿರುವ ಜಾಗದಲ್ಲಿ ೩ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತೆಂಗಿನ ಗರಿ ಹಾಗೂ ವಿವಿಧ ಬಗೆಯ ಫಲಪುಷ್ಪಗಳಿಂದ ಕೂಡಿದ ಅತ್ಯಾಧುನಿಕ ಶೈಲಿಯ ಹಸಿರು ಚಪ್ಪರ ಹಾಕಿಸಲಾಗುತ್ತಿದೆ. ನಾಡಿನ ವಿವಿಧ ಭಾಗಗಳಿಂದ 50 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ಹಿನ್ನಲೆಯಲ್ಲಿ ಗ್ರಾಮದ ಎಲ್ಲಾ ರಸ್ತೆ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗೆ ಗ್ರಾಮದ ಹೊರವಲಯದ ಮೂರ್‍ನಾಲ್ಕು ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ನಾಲ್ಕು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಬೀರೇಶ್ವರಪುರ ಗ್ರಾಮದ ಶ್ರೀ ದೊರೆ ದೊಡ್ಡಯ್ಯಸ್ವಾಮಿ, ಶ್ರೀ ಕಾಟಣ್ಣಸ್ವಾಮಿ, ತುಪ್ಪದಮಡು ಗ್ರಾಮದ ದಳವಾಯಿ ದೊಡ್ಡಯ್ಯಸ್ವಾಮಿ, ಮುಂಗೊಂಡ ಮುಂದಲಾರತಿ ಚಿಕ್ಕಯ್ಯಸ್ವಾಮಿ, ದೊಡ್ಡಾಬಾಲ ಗ್ರಾಮದ ಮಂತ್ರಿ ಹುಚ್ಚಪ್ಪಸ್ವಾಮಿ, ಹೊಂಗನೂರಮ್ಮದೇವಿ, ಅರಕೆರೆ ಗ್ರಾಮದ ಗಾಳಿಗುಂಡ ಹುಚ್ಚಪ್ಪಸ್ವಾಮಿ ಹಾಗೂ ಜೋಡಿನೇರಲಕೆರೆ ಗ್ರಾಮದ ದೊಡ್ಡದೇವಮ್ಮ ಮತ್ತು ಚಿಕ್ಕದೇವಮ್ಮದೇವಿಯ ಉತ್ಸವ ಮೂರ್ತಿಗಳು ಪಾಲ್ಗೊಳ್ಳಲಿವೆ.
ಸೋಮವಾರ ಸಂಜೆ ಗ್ರಾಮಕ್ಕೆ ಆಗಮಿಸುವ ಏಳು ಕೂಟದ ದೇವರುಗಳಿಗೆ ಧೂಪ ದೀಪದಾರತಿ ಮಾಡಿ ಮಂಗಳವಾದ್ಯ, ತಮಟೆ ಮೇಳದೊಂದಿಗೆ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗುವುದು. ನಂತರ ಹೂ ಹೊಂಬಾಳೆ, ಗಂಗಾಸ್ನಾನ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಬಳಿಕ ಗ್ರಾಮದ ದೊಡ್ಡಯ್ಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.ಮೇ 5 ರ ಬೆಳಗಿನಜಾವ 3ಗಂಟೆಗೆ ನಂದಿ ಧ್ವಜ ಕುಣಿತ, ಹಲಗೆ ಕುಣಿತ, ವೀರಮಕ್ಕಳ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಗೆ ಏಳು ಕೂಟದ ದೇವರುಗಳ ಉತ್ಸವ ಮೆರವಣಿಗೆ ನಂತರ ಶ್ರೀ ಕಾಟಣ್ಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವೈಭವದ ಕೊಂಡೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ದೊಡ್ಡಾಬಾಲದ ಶ್ರೀ ಮಂತ್ರಿ ಹುಚ್ಚಪ್ಪಸ್ವಾಮಿ ಬೀಡಿಕೆಗೆ ಹೋದ ನಂತರ ವಿವಿಧ ಗ್ರಾಮಗಳಿಂದ ಬಂದಿರುವ ಏಳುಕೂಟದ ದೇವರುಗಳ ಗ್ರಾಮಸ್ಥರಿಂದ ಬೀಡಿಕೆ ಉತ್ಸವ ಅನ್ನಸಂತರ್ಪಣೆ ಬಳಿಕ ಸಂಜೆ ವೀರಮಕ್ಕಳಿಂದ ಹಲ್ಲುಮರಿ ಸಿಗಿಯುವ ಕಾರ್ಯಕ್ರಮ ಜರುಗಲಿದೆ. ಸಂಜೆ 6ಕ್ಕೆ ಎಲ್ಲಾ ದೇವರುಗಳಿಗೆ ಗಂಗಾಸ್ನಾನ ಮಹಾಮಂಗಳಾರತಿ ನಡೆಯಲಿದೆ. ಬೀಡಿಕೆಯವರು ಹಾಗೂ ಭಕ್ತಾದಿಗಳಿಂದ ಆರತಿ ಸೇವೆ ಬಳಿಕ ದೇವರುಗಳ ಉತ್ಸವ ನಡೆಯಲಿದೆ.
ಮೇ.೬ರ ಬೆಳಿಗ್ಗೆ ಶ್ರೀ ಕಾಟಣ್ಣಸ್ವಾಮಿ ದೇವಸ್ಥಾನದಿಂದ ದೇವತೆಗಳ ಉತ್ಸವ ಹೊರಟು ಗ್ರಾಮದ ಹೊರವಲಯದ ಬನ್ನಿಮಂಟಪದಲ್ಲಿ ಸೇರಿ ಹಣ್ಣು ತುಪ್ಪ ಸೇವೆಯೊಂದಿಗೆ ಶಿವಪೂಜೆ ನಡೆಸಿ ಮಧ್ಯಾಹ್ನದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ನಂತರ ಪುರುಷರು ಮತ್ತು ಹೆಣ್ಣು ಮಕ್ಕಳ ಪ್ರತ್ಯೇಕ ಓಕಳಿ ಆಟ ನಡೆಯಲಿದೆ.ಮೇ 7ರ ಬೆಳಗ್ಗೆ ಶ್ರೀ ಕಾಟಣ್ಣಸ್ವಾಮಿ ದೇವಸ್ಥಾನದಲ್ಲಿ ವಿವಿಧ ಬಗೆಯ ಪೂಜಾ ವಿಧಿ ವಿಧಾನಗಳ ನಂತರ ಏಳು ಕೂಟದ ದೇವರುಗಳನ್ನು ಆಯಾ ಗ್ರಾಮಗಳಿಗೆ ಕರೆದೊಯ್ಯಲು ಕೂಟ ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ನಂತರ ಎಲ್ಲಾ ದೇವರುಗಳನ್ನು ಗ್ರಾಮದಿಂದ ಬೀಳ್ಕೊಡಲಾಗುವುದು. ಜಾತ್ರೆ.ಲ್ಲಿ ಪಾಲ್ಗೊಳ್ಳುವ ಸಹಸ್ರಾರು ಭಕ್ತರಿಗೂ ಪ್ರತಿನಿತ್ಯ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ.