ಮಹಾನ್ ಗ್ರಂಥ ರಾಮಾಯಣದ ವಿಚಾರ ನೀಡಿದ ವಾಲ್ಮೀಕಿ ಆದರ್ಶ ಮೈಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು

ಹರಪನಹಳ್ಳಿ: ಮಹನೀಯರ ಜಯಂತಿ ಆಯಾ ಸಮುದಾಯಕ್ಕೆ ಸೀಮಿತಗೊಳಿಸದೆ ಸಾಮರಸ್ಯ ಮೂಡಿಸುವ ಕೊಂಡಿಯನ್ನಾಗಿಸಬೇಕು ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ತಾಲೂಕಿನ ಕಾವಲಹಳ್ಳಿ ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.

ಮಹಾನ್ ಗ್ರಂಥ ರಾಮಾಯಣದ ವಿಚಾರ ನೀಡಿದ ವಾಲ್ಮೀಕಿ ಆದರ್ಶ ಮೈಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪರಿವರ್ತನೆಗೆ ಅವಕಾಶ ಸಿಕ್ಕಾಗ ದುಶ್ಚಟಗಳನ್ನು ಬಿಟ್ಟು ಮುಂದಾಗಬೇಕು ಎಂದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಾನ್ ವ್ಯಕ್ತಿಗಳ ಪುತ್ಥಳಿಗಳ ನಿರ್ಮಾಣ ಇಂದಿನ ಪೀಳಿಗೆಗೆ ಆದರ್ಶವಾಗಿರಬೇಕು ಎಂದರು.

ಕೆಪಿಸಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಮಾತನಾಡಿ, ಮನುಷ್ಯನ ಬಾಂಧವ್ಯದ ಕುರಿತು ಲೋಕಕ್ಕೆ ಸಾರಿದ ಮಹಾನ್ ಗ್ರಂಥ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ನೀಡಿದ್ದರು. ಜಯಂತಿಗಳು ಪೂಜೆ, ಪುನಸ್ಕಾರಕ್ಕೆ ಸೀಮಿತಗೊಳಿಸದೆ ಕೊಡುಗೆ, ವಿಚಾರ ಎಲ್ಲರಿಗೂ ತಲುಪಿಸುವ ಕಾರ್ಯ ಆಗಬೇಕು. ಬೇಡರ ಕುಲದಲ್ಲಿ ಜನಿಸಿದ ವಾಲ್ಮೀಕಿ ಆಗಿದ್ದರೂ ಅವರು ರಚಿಸಿದ ರಾಮಾಯಣದ ಪಾತ್ರಧಾರಿಗಳು ಇತರೆ ಜನಾಂಗಕ್ಕೆ ಸೇರಿದ್ದರು ಎನ್ನುವುದು ಅವರ ಸೌಹಾರ್ಧ ಭಾವದ ಸಂಕೇತವಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೆಶಕ ವೈ.ಡಿ. ಅಣ್ಣಪ್ಪ ಮಾತನಾಡಿ, ಹಿರಿಯರು ಸಮಾಜಕ್ಕೆ ನೀಡಿದ ಕೊಡುಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಗುಣಮಟ್ಟದ ಶಿಕ್ಷಣ ಪಡೆದು ಪ್ರಗತಿ ಹೊಂದಬೇಕು ಎಂದರು.

ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಯರಬಳ್ಳಿ ಉಮಾಪತಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾವಲಹಳ್ಳಿ ರವೀಂದ್ರ, ಭರಮಪ್ಪ, ಕೆ.ಶೇಖರಪ್ಪ, ಜನಾರ್ಧನ, ಬಾಲೆನಹಳ್ಳಿ ಕೆಂಚನಗೌಡ, ಶೆಟ್ಟಿನಾಯ್ಕ, ಕುಬ್ಯಾನಾಯ್ಕ, ಡಿ.ಸಿದ್ದಪ್ಪ, ರೇವಣಸಿದ್ದಪ್ಪ, ರಾಜನಾಯ್ಕ, ಮಂಜುನಾಥ್, ಕಾಮಣ್ಣ, ಲಿಂಗರಾಜ್, ನಂದ್ಯಪ್ಪ, ಸಿದ್ದೇಶ್, ನಾಗರಾಜ್, ಸಬ್ ಇನ್ಸ್ಪೆಕ್ಟರ್ ವಿಜಯ್ ಕೃಷ್ಣ, ಮಂಜಯ್ಯ ಇತರರು ಇದ್ದರು.