ಸಾರಾಂಶ
ಕನ್ನಡಪ್ರಭ ವಾರ್ತೆ ಕುರುಗೋಡು
ಕಲ್ಲು ಮಣ್ಣಿನಿಂದ ಕಟ್ಟಿದರೆ ಮಠವಾಗದು, ಆತ್ಮನುಭಾವ ಸಂಧಾನವಾದಾಗ ಮಾತ್ರ ಮಠವಾಗುತ್ತದೆ ಎಂದು ಹೆಮ್ಮೆಗೆನೂರಿನ ಹಂಪಿ ಸಾವಿರ ದೇವರ ಮಠದ ಶ್ರೀ ಷಬ್ರ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಇಲ್ಲಿಗೆ ಸಮೀಪದ ಎಮ್ಮಿಗನೂರಿನ ಗ್ರಾಮದಲ್ಲಿ ಹಂಪಿ ಸಾವಿರ ದೇವರು ಗುರು ಮಹಾಂತೀನ ಮಠದಲ್ಲಿ ಭಕ್ತರು ಆಯೋಜಿಸಿದ್ದ ಶ್ರೀ ಷ ಬ್ರ ವಾಮದೇವ ಮಹಾಂತ ಶ್ರೀಗಳ ಜನ್ಮದಿನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮಸ್ಕಾರ ಇದ್ದಲ್ಲಿ ಗೌರವ ತಾನಾಗಿ ಪ್ರಾಪ್ತಿಯಾಗುತ್ತದೆ. ಜಲದಿಂದ ಹುಟ್ಟಿದ ತೀರ್ಥ ಶ್ರೇಷ್ಠವಾದಂತೆ. ಆಡಂಬರ ಬಿಟ್ಟು ಉತ್ತಮ ನಡೆ- ನುಡಿಗಳಿಂದ ಮನುಷ್ಯ ಶ್ರೇಷ್ಠತೆ ಪಡೆಯುತ್ತಾನೆ. ಗಿಡದ ಹೂವು ಹಣ್ಣುಗಳಲ್ಲಿ ಜೀವವಿಲ್ಲ. ಕಾಣದ ಬೇರುಗಳಿಗೆ ಜೀವವಿದೆ.
ತನುವಿನಲ್ಲಿ ನಿರ್ಮೂಹ, ಮನದಲ್ಲಿ ನಿರಹಂಕಾರ, ವಿಚಾರದಲ್ಲಿ ಉದಾಸೀನ, ಚಿತ್ತದಲ್ಲಿ ನಿರಪೇಕ್ಷೆ, ಜ್ಞಾನದಲ್ಲಿ ಪರಮಾನಂದ ನೆಲೆಗೊಂಡಾಗ ಮಾತ್ರ ಹುಟ್ಟು ಸಾರ್ಥಕತೆ ಪಡೆಯುತ್ತದೆ ಎಂದರು.ಸಿಂಧನೂರಿನ ಸೋಮನಾಥ ಶಿವಾಚಾರ್ಯರು ಮಾತನಾಡಿ, ಗುರುವಿನ ಒಡನಾಟದಿಂದ ಅವರ ಉಪದೇಶಾಮೃತವನ್ನು ಪಡೆದು ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ರೂಪುಗೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ ಶಶಿಧರ ಮೇಟಿ ಮಾತನಾಡಿ. ನಾಡಿನಲ್ಲಿ ಹಲವಾರು ವೀರಶೈವ ಮಠಗಳು ಅಕ್ಷರ, ಅನ್ನ, ಆಶ್ರಯ ದಾನ ಮಾಡುವ ಮೂಲಕ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕಾಗಿವೆ ಎಂದರು.ಸಿಂಧನೂರಿನ ಸೋಮನಾಥ ಶಿವಾಚಾರ್ಯ ಶ್ರೀಗಳು, ಮಸ್ತಿಯ ಹೊರ ರುದ್ರಮುನಿ ಶಿವಾಚಾರ್ಯರು, ಅರಗಿನ ದೋಣಿ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಗೊರೆಬಾಳ್ ಚೆನ್ನಪ್ಪ ತಾತ, ಎಚ್. ವೀರಾಪುರದ ಶಿವಲಿಂಗಮಠದ ಜಡೆ ತಾತ, ಪ್ರಮುಖರಾದ ಮಸೀದಿಪುರ ಸಿದ್ದರಾಮನಗೌಡ, ಕೆ.ಎಂ. ಹಿಮಯ್ಯಸ್ವಾಮಿ, ಕೋರಿಕೊಪ್ಪ ಶರಣಪ್ಪ, ಬಾದನಹಟ್ಟಿತಿಮ್ಮಪ್ಪ, ಚಾನಳ್ ರಾಮಣ್ಣ, ಬಿ. ಸದಾಶಿವಪ್ಪ, ಶಿವನೇಗೌಡರ, ಶಿಕ್ಷಕ ರಾಮಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು, ಅಕ್ಕಮಹಾದೇವಿ ಬಳಗ ಸದಸ್ಯರು, ಕಂಪ್ಲಿ, ಕುರುಗೋಡು, ಗುತ್ತಿಗನೂರು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.