ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರ ಹುಟ್ಟುಹಬ್ಬ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಜೂ.22ರಂದು ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ಪಟ್ಟಣದ ಬಸವೇಶ್ವರನಗರದಲ್ಲಿ ಜೆಡಿಎಸ್ ಕಚೇರಿ ಆವರಣದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪಕ್ಷದ ತಾಲೂಕು ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಶಾಸಕ ಎಚ್.ಟಿ.ಮಂಜು ಅವರ ಹುಟ್ಟುಹಬ್ಬದ ಜೊತೆಗೆ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುಂಬರುವ ಜಿಪಂ, ತಾಪಂ, ಗ್ರಾಪಂ, ಪುರಸಭಾ ಚುನಾವಣೆಯಲ್ಲಿ ದೃಷ್ಟಿಯನ್ನಿಟ್ಟುಕೊಂಡು ಚರ್ಚೆ ನಡೆಸಲಾಗುವುದು ಎಂದರು.
ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಎಚ್.ಟಿ.ಮಂಜು ಅವರನ್ನು ಶಾಸಕರನ್ನಾಗಿ ಮಾಡುವುದು ತಾಲೂಕಿನ ನಿಷ್ಟಾವಂತ ಜೆಡಿಎಸ್ ಕಾರ್ಯಕರ್ತರೆಲ್ಲರ ಒಮ್ಮತ ಅಭಿಪ್ರಾಯವಾಗಿದೆ. ಈ ಸಮಾವೇಶವನ್ನು ಜೆಡಿಎಸ್ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಿಂದ ಆಚರಿಸಲು ನಿರ್ಧರಿಸಿದ್ದು, ಸುಮಾರು 30 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಭದ್ರಕೋಟೆ ಎಂಬುದು ಕಳೆದ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ ಎಚ್.ಟಿ.ಮಂಜಣ್ಣ ಅವರು ತಾಲೂಕಿನಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಆದರೆ, ಈ ಸರ್ಕಾರದಿಂದ ಅನುದಾನ ಮಾತ್ರ ತೀರಾ ಕಡಿಮೆ ಇದೆ ಎಂದರು.
ನಮ್ಮ ಶಾಸಕರು ಅವರ ನಿರೀಕ್ಷೆಗೂ ಮೀರಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲದ ಕಾರಣ 2028ಕ್ಕೂ ಮತ್ತೊಮ್ಮೆ ಗೆಲ್ಲುವುದು ಅನಿವಾರ್ಯ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬರುವುದು ಖಚಿತ. ಆಗ ಮಂಜಣ್ಣ ಸಚಿವರಾಗುವ ಅವಕಾಶ ಇರುವ ಕಾರಣ ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜೂ.22ರ ಕಾರ್ಯಕರ್ತರ ಸಮಾವೇಶದಲ್ಲಿ ರೈತರಿಗೆ ತೆಂಗಿನ ಸಸಿಗಳು ಹಾಗೂ ವಿವಿಧ ಬಗೆಯ ಹೂವು ಮತ್ತು ಹಣ್ಣಿನ ಸಸಿಗಳನ್ನು ವಿತರಣೆ ಮಾಡಲಾಗುವುದು. ಸಮಾವೇಶವನ್ನು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಶಾಸಕರಾದ ಜಿ.ಡಿ.ಹರೀಶ್‌ಗೌಡ, ಸಿ.ಎನ್. ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಡಾ.ಕೆ.ಅನ್ನಧಾನಿ, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುವರು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಕಾರ್ಯಕರ್ತರಿಗೆ ಸಸ್ಯಹಾರ ಹಾಗೂ ಮಾಂಸಹಾರಿ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಬೃಹತ್ ಸಮಾವೇಶಕ್ಕೆ ಹೆಚ್ಚಿನ ಕಾರ್ಯಕರ್ತರು ಆಗಮಿಸಿ ಸಮಾವೇಶ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.ಪೂರ್ವಭಾವಿ ಸಭೆಯಲ್ಲಿ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಮಹಾದೇವೇಗೌಡ, ಗೌರವಾಧ್ಯಕ್ಷ ತೋಟಪ್ಪಶೆಟ್ಟಿ, ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ರಘು, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಜಿಲ್ಲಾ ದಿಶಾ ಕಮಿಟಿ ಸದಸ್ಯ ನರಸನಾಯಕ್, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲೇಶ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಚಂದ್ರೇಗೌಡ, ರಾಮಚಂದ್ರು, ನಂಜಪ್ಪ, ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಂ.ಆರ್.ಮನು, ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ನಿರ್ದೇಶಕರಾದ ಎಸ್.ಎಲ್.ಮೋಹನ್, ಎನ್.ಕೆ.ದಿಲೀಪ್‌ಕುಮಾರ್, ಕೆ.ಬಿ.ಮಧು, ಎಚ್.ಟಿ.ಲೋಕೇಶ್, ದಿನೇಶ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾಲೋಕೇಶ್, ಪ್ರಧಾನ ಕಾರ್ಯದರ್ಶಿ ರತಿಮಹಾದೇವ್, ಜೆಡಿಎಸ್ ಎಸ್.ಸಿ.ಘಟಕದ ಅಧ್ಯಕ್ಷ ನರಸಿಂಹ, ಪ್ರಧಾನ ಕಾರ್ಯದರ್ಶಿ ಆರ್.ಟಿ.ಉಮೇಶ್, ಯುವ ಜೆಡಿಎಸ್ ಅಧ್ಯಕ್ಷ ಮೀಸೆ ಮಹಾದೇವೇಗೌಡ, ಹೋಬಳಿ ಘಟಕಗಳ ಜೆಡಿಎಸ್ ಅಧ್ಯಕ್ಷರಾದ ಸಾಮಿಲ್ ರವಿಕುಮಾರ್, ವಸಂತಕುಮಾರ್, ಸ್ವಾಮೀಗೌಡ, ಬಸವಲಿಂಗಪ್ಪ, ಅಶೋಕ್, ತಾಪಂ ಮಾಜಿ ಸದಸ್ಯ ಸೋಮಶೇಖರ್, ಪರಮೇಶ್ ಹಲವರು ಭಾಗವಹಿಸಿದ್ದರು.