ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 94ನೇ ಹುಟ್ಟುಹಬ್ಬವನ್ನು ಪಟ್ಟಣದಲ್ಲಿ ಸೋಮವಾರ ಜೆಡಿಎಸ್ ಪಕ್ಷದಿಂದ ಅದ್ಧೂರಿಯಾಗಿ ಆಚರಿಸಲಾಯಿತು.ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ದುಂಮಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ನೂರಾರು ಜೆಡಿಎಸ್ ಕಾರ್ಯಕರ್ತರು ಒಳ ರೋಗಿಗಳಿಗೆ ಹಣ್ಣು ವಿತರಿಸಿದರು. ಆಸ್ಪತ್ರೆ ಹೊರಾವರಣದಲ್ಲಿ ಕೇಕ್ ಕತ್ತರಿಸಿ, ಮಾವು, ಸಪೋಟ ಮತ್ತು ತೆಂಗಿನ ಸಸಿಗಳನ್ನು ರೈತ ಸಮುದಾಯಕ್ಕೆ ಹಂಚುವ ಮೂಲಕ ರೈತ ಪ್ರಧಾನಿ ಎಂದೇ ಖ್ಯಾತಿ ಪಡೆದ ಎಚ್.ಡಿ.ದೇವೇಗೌಡರಿಗೆ ಶುಭಾ ಹಾರೈಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಟಿ.ಮಂಜು, ದೇಶ ಕಂಡ, ತಮ್ಮ ರಾಜಕೀಯ ಜೀವನದುದ್ದಕ್ಕೂ ರೈತ ಪರ ಚಿಂತನೆ ಮಾಡುತ್ತಿರುವ ದೇವೇಗೌಡರು ನಿಜವಾದ ರೈತ ನಾಯಕ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯನವರು ಕೆ.ಆರ್.ಎಸ್ ಅಣೆಕಟ್ಟೆ ಕಟ್ಟಿ ಮಂಡ್ಯ ಜಿಲ್ಲೆಯ ರೈತರ ಬದುಕು ಹಸನಾಗಲು ಮುನ್ನುಡಿ ಬರೆದರೆ ಕಾವೇರಿ ಜಲ ವಿವಾದದ ವೇಳೆ ಜಿಲ್ಲೆಯ ರೈತರ ಹಿತಕ್ಕಾಗಿ ಹೋರಾಡಿದವರು ನಮ್ಮ ದೇವೇಗೌಡರು ಎಂದರು.ಹೇಮಾವತಿ ಜಲಾನಯನ ಪ್ರದೇಶದ ರೈತರು ಇಂದು ಹೇಮೆ ನೀರನ್ನು ತಮ್ಮ ಹೊಲ ಗದ್ದೆಗಳಿಗೆ ಹರಿಸಿಕೊಳ್ಳುತ್ತಿದ್ದರೆ ಅದಕ್ಕೆ ಕಾರಣಕರ್ತರು ದೇವೇಗೌಡರು. ರಾಜ್ಯದ ನೀರಾವರಿ ಸಚಿವರಾಗುತ್ತಿದ್ದಂತೆಯೇ ಹೇಮಾವತಿ ಕಾಲುವೆಗಳ ನಿರ್ಮಾಣ ಮಾಡಿ ಹೇಮಾವತಿ ಜಲಾನಯನ ಪ್ರದೇಶದ ರೈತರಿಗೆ ನೀರು ಕೊಟ್ಟರು ಎಂದು ಸ್ಮರಿಸಿದರು.
ತಮ್ಮ 94ರ ಇಳಿವಯಸ್ಸಿನಲ್ಲಿಯೂ ನಾಡಿನ ಅನ್ನದಾತರ ಸಂಕಷ್ಟಗಳ ಪರಿಹಾರದ ಬಗ್ಗೆ ಯೋಚಿಸುವ ದೇವೇಗೌಡರು ಶತಾಯಷಿಗಳಾಗಬೇಕು. ಅವರ ರಾಜಕೀಯ ಅನುಭವಗಳು ದೇಶದ ಜನರಿಗೆ ಅತ್ಯಗತ್ಯವಾಗಿದೆ ಎಂದರು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಕಾರ್ಯಾಧ್ಯಕ್ಷ ಮಹದೇವೇಗೌಡ, ತಾಪಂ ಮಾಜಿ ಸದಸ್ಯ ಹುಲ್ಲೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ವಕೀಲ ವಡ್ಡರಹಳ್ಳಿ ಧನಂಜಯ, ಮುಖಂಡರಾದ ಮಡುವಿನಕೋಡಿ ಮನು, ಕಿಕ್ಕೇರಿ ಮಧು, ಬೆಳತೂರು ಪುಟ್ಟೇಗೌಡ, ಬೀರವಳ್ಳಿ ಕೃಷ್ಣೇಗೌಡ, ತೋಂಟಪ್ಪಶೆಟ್ಟಿ, ಬಸವಲಿಂಗಪ್ಪ, ಹುಬ್ಬನಹಳ್ಳಿ ಬಲರಾಂ, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತಕುಮಾರ್, ಸಂತೇಬಾಚಹಳ್ಳಿ ರವಿ, ಪಿ.ಕೆ.ಜಿ ಮಹೇಶ್, ಚಿಕ್ಕಯಾಚೇನಹಳ್ಳಿ ಸಂದೇಶ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ.ಮಂಜುಳ, ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್, ಆರೋಗ್ಯ ಪರಿವೀಕ್ಷಣಾಧಿಕಾರಿ ಶೀಳನೆರೆ ಸತೀಶ್, ಔಷದ ಉಗ್ರಾಣಾಧಿಕಾರಿ ಸತೀಶ್ ಬಾಬು ಇದ್ದರು.