ಬಿರುಬಿಸಿಲು: ಮಣ್ಣಿನ ಮಡಕೆಗಳಿಗೆ ಹೆಚ್ಚಿದ ಬೇಡಿಕೆ!

| Published : Mar 25 2024, 12:49 AM IST

ಬಿರುಬಿಸಿಲು: ಮಣ್ಣಿನ ಮಡಕೆಗಳಿಗೆ ಹೆಚ್ಚಿದ ಬೇಡಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಒಂದು ಮಣ್ಣಿನ ಮಡಕೆಯ ಬೆಲೆ ₹50ರಿಂದ 100 ಇತ್ತು, ಆದರೆ ಈಗ ₹100ರಿಂದ ₹200ಕ್ಕೆ ಮಾರಾಟವಾಗುತ್ತಿದೆ

ಗದಗ: ಬಡವರ ಫ್ರಿಡ್ಜ್‌ ಎಂದೇ ಕರೆಯಲ್ಪಡುವ ಮಣ್ಣಿನ ಮಡಕೆಗೆ ಗದಗಿನಲ್ಲಿ ಭಾರೀ ಬೇಡಿಕೆ ಹೆಚ್ಚಾಗಿದೆ. ಬೇಸಿಗೆ ಬಿಸಿಲಿನ ನಡುವೆ ನೈಸರ್ಗಿಕವಾದ ತಂಪು ನೀರು ಕುಡಿಯುವುದಕ್ಕಾಗಿ ಜನರು ಹಾತೊರೆಯುತ್ತಿದ್ದಾರೆ. ಇದಕ್ಕಾಗಿ ಜನರು ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ.

ಮಣ್ಣಿನ ಮಡಕೆಯ ಬೇಡಿಕೆ ಹೆಚ್ಚಾಗಿದ್ದು, ಜತೆಗೆ ಮಣ್ಣಿನ ಮಡಕೆಗಳ ಬೆಲೆಯೂ ಹೆಚ್ಚಾಗಿದೆ. ಈ ಹಿಂದೆ ಒಂದು ಮಣ್ಣಿನ ಮಡಕೆಯ ಬೆಲೆ ₹50ರಿಂದ 100 ಇತ್ತು, ಆದರೆ ಈಗ ₹100ರಿಂದ ₹200ಕ್ಕೆ ಮಾರಾಟವಾಗುತ್ತಿದೆ. ಇನ್ನು ಈಗ ವಿವಿಧ ಆಕಾರಗಳಲ್ಲಿ ಮಡಕೆಗಳು ಸಾರ್ವಜನಿಕರ ಬಳಕೆಗೆ ಲಭ್ಯವಿದೆ ಎನ್ನುವುದು ವಿಶೇಷ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲು ಹೆಚ್ಚು ಇದ್ದು, ನೆತ್ತಿ ಸುಡುವ ರಣಬಿಸಿಲಿಗೆ ಜನರು ಸುಸ್ತಾಗಿ ಹೋಗಿದ್ದಾರೆ. ಬಿಸಿಲ ಬೇಗೆಯಿಂದ ಹೊರ ಬರಲು ಜನರು ಭಯಪಡುವಂತಾಗಿದೆ. ಹಣ್ಣಿನ ಜ್ಯೂಸ್, ಎಳನೀರು, ಕಬ್ಬಿನ ಹಾಲು, ತಂಪು ಪಾನೀಯ ಅಂಗಡಿಗಳ ಮುಂದೆ ಸಂಜೆಯವರೆಗೆ ಜನರು ನಿಂತಿರುತ್ತಾರೆ.

ಇಂದಿನ ಆಧುನಿಕ ದಿನಗಳಲ್ಲಿ ಜನತೆ ಮರಳಿ ಸಂಪ್ರದಾಯಿಕ ಜೀವನ ಶೈಲಿಗೆ ಮರಳುತ್ತಿದ್ದು, ಮಣ್ಣಿನ ಮಡಕೆಗಳಲ್ಲಿ ತಯಾರಿಸಿದ ಅಡುಗೆ ರುಚಿಯಾಗಿರುತ್ತದೆ ಹಾಗೂ ಆರೋಗ್ಯಯುತವಾಗಿರುತ್ತದೆ ಎಂಬ ಜಾಗೃತಿ ಜನರಲ್ಲಿ ಮೂಡಿದ್ದು, ಅಡುಗೆ ತಯಾರಿಸಲು ಗ್ರಾಮೀಣ ಭಾಗ ಸೇರಿದಂತೆ ನಗರ ಪ್ರದೇಶದ ಜನರು ಮಣ್ಣಿನ ಮಡಕೆಗಳ ಬಳಕೆಗೆ ಮುಂದಾಗುತ್ತಿದ್ದಾರೆ. ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಮಣ್ಣಿನ ಮಡಕೆಗಳೇ ಶ್ರೇಷ್ಠ ಎಂದು ಮಣ್ಣಿನ ಮಡಕೆಗಳ ಬಳಕೆಯೂ ಕೂಡಾ ಹೆಚ್ಚಾಗಿದೆ.

ಮನುಷ್ಯ ಹುಟ್ಟಿನಿಂದ ಸಾವಿನ ವರೆಗೆ ಮಣ್ಣಿನ ಮಡಕೆ ಬೇಕೇ ಬೇಕು ಎಂಬ ಕಾಲವೊಂದಿತ್ತು. ಮನುಷ್ಯ ಸತ್ತಾಗ ಮಡಕೆ ಬೇಕಿತ್ತು. ಮನೆಯಲ್ಲಿ ಅಡುಗೆ ತಯಾರಿಸಲು ಮಣ್ಣಿನ ಮಡಕೆ ಹೆಚ್ಚಾಗಿ ಬಳಸುತ್ತಿದ್ದರು. ಇದರಲ್ಲಿ ತಯಾರಿಸಿದ ಅಡುಗೆ ಬಹಳ ರುಚಿಕರವಾಗಿರುತ್ತಿತ್ತು. ಬೇಡಿಕೆಗೆ ಅನುಗುಣವಾಗಿ ಕುಂಬಾರಿಕೆ ವೃತ್ತಿಗೂ ಬೆಲೆಯಿತ್ತು.