ಸಾರಾಂಶ
ಹಾನಗಲ್ಲ: ಬರ, ಬಿರು ಬೇಸಿಗೆಯ ನಡುವೆ ಶಾಲಾ ಮಕ್ಕಳಿಗೆ ರಜಾ ಅವಧಿಯ ಬಿಸಿಯೂಟ ಯೋಜನೆ ಏ. 12ರಿಂದ ಆರಂಭವಾಗಲಿದೆ. ಹಾನಗಲ್ಲ ತಾಲೂಕಿನ ೧೮೭೩೬ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು, ೧೮೧ ಅಡುಗೆ ಕೇಂದ್ರಗಳಲ್ಲಿ ೪೧ ದಿನ ಅನ್ನ ಸಾಂಬಾರು ಸೇವಿಸಲಿದ್ದಾರೆ.
ರಾಜ್ಯದ ೩೧ ಕಂದಾಯ ಜಿಲ್ಲೆಗಳ ೨೨೩ ಬರ ಪೀಡಿತ ತಾಲೂಕುಗಳಲ್ಲಿ ಒಂದಾಗಿರುವ ಹಾನಗಲ್ಲ ತಾಲೂಕಿನಲ್ಲಿ ೧ ರಿಂದ ೧೦ನೇ ತರಗತಿಯ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಈ ಸೌಲಭ್ಯವನ್ನು ಒದಗಿಸಲಾಗಿದೆ. ಅಡುಗೆಯವರು ನಿತ್ಯ ೧೦ ಗಂಟೆಗೆ ಬಂದು ಅಡುಗೆ ಸಿದ್ಧಪಡಿಸಿ ಮಧ್ಯಾಹ್ನ ೧೨.೩೦ ಗಂಟೆಯಿಂದ ೨ ಗಂಟೆಯವರೆಗೆ ಮಕ್ಕಳಿಗೆ ಬಿಸಿಯೂಟ ನೀಡಬೇಕು. ಇದಕ್ಕಾಗಿ ಹಾನಗಲ್ಲ ತಾಲೂಕಿನ ೨೮೦ ಶಾಲೆಗಳ ಮಕ್ಕಳಿಗೆ ೧೮೧ ಅಡುಗೆ ಕೇಂದ್ರಗಳನ್ನು ಗುರುತಿಸಿ ಬಿಸಿಯೂಟ ವ್ಯವಸ್ಥೆ ಮಾಡಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ನೋಡಲ್ ಅಧಿಕಾರಿ ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.ನಿತ್ಯ ಬಿಸಿಯೂಟ ಸ್ವೀಕರಿಸುವ ಮಕ್ಕಳ ಹಾಜರಾತಿ ಕಡ್ಡಾಯವಾಗಿ ನೀಡಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಬಿಸಿಯೂಟ ಸ್ವೀಕರಿಸುವ ಮಕ್ಕಳು ಹಾಗೂ ಪಾಲಕ ಪೋಷಕರು ಬಿಸಿಯೂಟ ಸ್ವೀಕರಿಸಲು ಒಪ್ಪಿಗೆ ಪತ್ರ ನೀಡಬೇಕು. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳಿಸಿ ಊಟವಾದ ನಂತರ ಕರೆದುಕೊಂಡು ಹೋಗುವ ಜವಾಬ್ದಾರಿ ಪಾಲಕರದ್ದೇ ಆಗಿದೆ. ಭಾನುವಾರ ಹೊರತುಪಡಿಸಿ ಎಲ್ಲ ರಜಾ ದಿನಗಳನ್ನು ಒಳಗೊಂಡು ಏಪ್ರಿಲ್ 12ರಿಂದ ಮೇ ೨೮ರ ವರೆಗೆ ೪೧ ದಿನ ಈ ಬಿಸಿಯೂಟ ವ್ಯವಸ್ಥೆ ಇದೆ. ಬೇರೆ ಊರಿನ ಶಾಲೆಯ ಮಕ್ಕಳು ಬಂದರೂ ಪರವಾನಿಗೆ ಪಡೆದು ಯಾವುದೇ ಕೇಂದ್ರದಲ್ಲಿ ಬಿಸಿಯೂಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ೨೫೦ಕ್ಕಿಂತ ಹೆಚ್ಚು ಮಕ್ಕಳಿರುವ ಕೇಂದ್ರಗಳಲ್ಲಿ ಉಸ್ತುವಾರಿಗಾಗಿ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲು ಅವಕಾಶವಿದೆ. ಅಲ್ಲದೆ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯ ಕೂಡ ಇದೆ.
ಶುದ್ಧ ನೀರು: ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ ೬೬ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ಕೊರತೆ ಇದೆ ಎಂದು ಗುರುತಿಸಲಾಗಿದೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರೀ ಬಿಸಿಲಿಗೆ, ಹೆಚ್ಚು ನೀರು ಬೇಕು. ಅದು ಶುದ್ಧವಾಗಿರಬೇಕು. ಶುದ್ಧ ಹಾಗೂ ಅಗತ್ಯ ನೀರನ್ನು ಒದಗಿಸುವುದು ತಾಲೂಕು ಆಡಳಿತಕ್ಕೆ ಒಂದು ದೊಡ್ಡ ಸವಾಲು ಎಂಬ ಸಂಗತಿಯೂ ಇದೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಶುಚಿ ರುಚಿಯಾದ ಬಿಸಿಯೂಟವನ್ನು ಮೆನುವಿನಂತೆ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ನೀರಿನ ಕೊರತೆಯಾದಲ್ಲಿ ಸಂಬಂಧಿಸಿದ ಅಡುಗೆ ಕೇಂದ್ರದ ಊರಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿ ವಹಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾಗುತ್ತದೆ.ಆಹಾರ ಪೂರೈಕೆ: ಈಗಾಗಲೇ ೨೮೦ ಶಾಲೆಗಳಿಂದ ಸಂಯೋಜಿಸಿ ಗುರುತಿಸಲಾದ ಎಲ್ಲ ೧೮೨ ಅಡುಗೆ ಕೇಂದ್ರಗಳಿಗೆ ಸಿಲಿಂಡರ್ ಸಹಿತ ಎಲ್ಲ ಆಹಾರ ಧಾನ್ಯ ಪೂರೈಕೆ ಮಾಡಲಾಗಿದೆ. ಈ ರಜಾ ಅವಧಿಯ ೪೧ ದಿನಗಳಿಗೆ ಯಾವುದೇ ರೀತಿಯಲ್ಲಿ ಆಹಾರ ಧಾನ್ಯದ ಕೊರತೆ ಇಲ್ಲ.
೨೦೧೮-೧೯ಕ್ಕಿಂತ ಮೊದಲು ರಜಾ ಅವಧಿಯಲ್ಲಿ ಬಿಸಿಯೂಟದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಬರಗಾಲದ ನಿಮಿತ್ತ ಈ ರಜೆಯಲ್ಲಿ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ತಾಲೂಕು ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ ನೋಡಲ್ ಅಧಿಕಾರಿಗಳು, ಮುಖ್ಯ ಶಿಕ್ಷಕರು, ಶಿಕ್ಷಕರು ಈ ರಜೆಯಲ್ಲಿ ಮಕ್ಕಳ ಬಿಸಿಯೂಟದ ಹೊಣೆ ನಿರ್ವಹಣೆ ಮಾಡಬೇಕಾಗಿದೆ. ಬಹಳಷ್ಟು ಶಿಕ್ಷಕರು ಚುನಾವಣಾ ಕಾರ್ಯದಲ್ಲಿ ನಿರತರಾಗಿರುವಾಗಲೂ ಈ ಬಿಸಿಯೂಟ ನಿರ್ವಹಣೆಯನ್ನೂ ನಿರ್ವಹಿಸುವ ಅಗತ್ಯವಿದೆ. ಬಿಸಿ ಬಿಸಿ ಬೇಸಿಗೆಯ ಬಿಸಿಯೂಟ ಅಧಿಕಾರಿಗಳು, ಮಕ್ಕಳ ಪಾಲಕರು ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಬೇಕಾಗಿದೆ. ಚುನಾವಣಾ ಕಾರ್ಯದ ಒತ್ತಡದಲ್ಲಿಯೂ ಅಧಿಕಾರಿಗಳು ಮಕ್ಕಳ ಒಳಿತಿಗಾಗಿ ಈ ಕಾರ್ಯ ನಿರ್ವಹಣೆ ಮಾಡಲು ಸಜ್ಜಾಗಿರುವುದು ಪ್ರಶಂಸೆಯ ಸಂಗತಿಯೇ ಹೌದು.ಬೇಸಿಗೆಯ ೪೧ ದಿನಗಳಿಗಾಗಿ ಬಿಸಿಯೂಟಕ್ಕೆ ಸಿಬ್ಬಂದಿ ನೇಮಿಸಲಾಗಿದೆ. ಸಿಆರ್‌ಪಿ, ಮುಖ್ಯಶಿಕ್ಷಕರು, ಕ್ಲಸ್ಟರ್, ವಲಯ ನೋಡಲ್ ಅಧಿಕಾರಿಗಳು, ಅಗತ್ಯವಿರುವಲ್ಲಿ ಸರಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಅಡುಗೆ ಕೇಂದ್ರಗಳ ಉಸ್ತುವಾರಿಗೆ ನೇಮಿಸಲಾಗಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ಜರುಗಿಸಲು ಪಿಡಿಒಗೆ ತಿಳಿಸಲಾಗಿದೆ. ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರ ಸಹಕಾರದಿಂದ ಬೇಸಿಗೆ ಬಿಸಿಯೂಟವನ್ನು ಯಶಸ್ವಿ ಮಾಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಹೇಳಿದರು.ಅಡುಗೆ ಕೇಂದ್ರ ಗುರುತಿಸಿ ಒಟ್ಟು ಶಾಲೆಗಳನ್ನು ಸಂಯೋಜಿಸಿ ೧೮೧ ಅಡುಗೆ ಕೇಂದ್ರಗಳನ್ನು ಸಿದ್ಧ ಮಾಡಲಾಗಿದೆ. ಇದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒಳಗೊಂಡು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಅಗತ್ಯ ಆಹಾರ ಧಾನ್ಯ ಕೊರತೆ ಇಲ್ಲದಂತೆ ಪೂರೈಸಲಾಗಿದ್ದು, ಯಾವುದೇ ಕೊರತೆ ಇಲ್ಲದೆ ಬಿಸಿಯೂಟ ಸಮರ್ಪಕವಾಗಿ ನಡೆಯಲಿದೆ. ಆಹಾರ ಧಾನ್ಯದ ಕೊರತೆ ಕಂಡು ಬಂದರೆ ತಕ್ಷಣ ಮತ್ತೆ ಪೂರೈಸಲಾಗುವುದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಯ್ಯ ಹಿರೇಮಠ ಹೇಳಿದರು.