ಸಿಹಿ ನೀಡಿದ ರೈತರಿಗೆ ಕಹಿಯಾದ ಕಾರ್ಖಾನೆ!

| Published : Jun 19 2024, 01:01 AM IST

ಸಾರಾಂಶ

ರೈತರಿಂದ ಕಬ್ಬು ಪಡೆದು ಸಿಹಿಯಾದ ಕಾರ್ಖಾನೆ ರೈತರ ಬಾಕಿ ಹಣ ₹70.80 ಕೋಟಿ (ಬಡ್ಡಿಸೇರಿ) ಬಾಕಿ ಉಳಿಸಿಕೊಳ್ಳುವ ಮೂಲಕ ಬಬಲೇಶ್ವರ ತಾಲೂಕಿನ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ರೈತರಿಗೆ ಕಹಿಯಾಗಿ ಪರಿಣಮಿಸಿದೆ. ಇದರಿಂದ ಕಬ್ಬು ಪೂರೈಸಿದ ಅನ್ನದಾತರು ನಿತ್ಯ ಕಾರ್ಖಾನೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರಿಂದ ಕಬ್ಬು ಪಡೆದು ಸಿಹಿಯಾದ ಕಾರ್ಖಾನೆ ರೈತರ ಬಾಕಿ ಹಣ ₹70.80 ಕೋಟಿ (ಬಡ್ಡಿಸೇರಿ) ಬಾಕಿ ಉಳಿಸಿಕೊಳ್ಳುವ ಮೂಲಕ ಬಬಲೇಶ್ವರ ತಾಲೂಕಿನ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ರೈತರಿಗೆ ಕಹಿಯಾಗಿ ಪರಿಣಮಿಸಿದೆ. ಇದರಿಂದ ಕಬ್ಬು ಪೂರೈಸಿದ ಅನ್ನದಾತರು ನಿತ್ಯ ಕಾರ್ಖಾನೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ವರ್ಷಾನುಗಟ್ಟಲೇ ಕಷ್ಟಪಟ್ಟು ಕಬ್ಬು ಬೆಳೆದ ರೈತರೆಲ್ಲ ಕಾರ್ಖಾನೆಗೆ ಕಬ್ಬು ನೀಡಿ ತಮಗೆ ಬರಬೇಕಿರುವ ಬಾಕಿ ಬಿಲ್‌ಗಾಗಿ ನಿತ್ಯ ಕಾರ್ಖಾನೆಗೆ ಅಲೆದಾಡುತ್ತಿದ್ದಾರೆ. ಬಬಲೇಶ್ವರ ತಾಲೂಕಿನ ಶ್ರೀ ಬಸವೇಶ್ವರ ಶುಗರ್ಸ್ ಲಿಮಿಟೆಡ್‌ಗೆ ಕಬ್ಬು ಕಳಿಸಿದ ರೈತರು ಕಬ್ಬಿನ ಬಿಲ್ ಪಾವತಿಗಾಗಿ ಅಲೆದಾಡಿ ಚಪ್ಪಲಿ ಸವೆಸುತ್ತಿದ್ದಾರೆ. ಆದರೂ ಕಾರ್ಖಾನೆ ಆಡಳಿತ ಮಂಡಳಿಯ ಮೊಂಡುತನದಿಂದ ರೈತರಿಗೆ ಸಂಕಷ್ಟ ಬಂದಿದೆ.

ಎಷ್ಟು ಹಣ ಬಾಕಿ?:

2023-24ನೇ ಸಾಲಿನ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಜನವರಿ, ಫೆಬ್ರುವರಿ, ಮಾರ್ಚ್ ಈ ಮೂರು ತಿಂಗಳಿನಲ್ಲಿ ಕಬ್ಬು ಕಳುಹಿಸಿದ್ದ ಅಂದಾಜು 1500ಕ್ಕೂ ಅಧಿಕ ರೈತರ 2,26,666 ಟನ್ ಕಬ್ಬಿನ ಬಿಲ್ ₹68.44 ಕೋಟಿ ಬಾಕಿ ಉಳಿದಿದೆ. ಕಬ್ಬು ನುರಿಸುವುದಕ್ಕೂ ಮೊದಲು ಕಾರ್ಖಾನೆಯವರು ಕೊಟ್ಟಿದ್ದ ಭರವಸೆಗಳಂತೆ ಕಬ್ಬು ನುರಿಸಿದ ಬಳಿಕ ರೈತರೊಂದಿಗೆ ಮಾತು ಕೊಟ್ಟಂತೆ ನಡೆದುಕೊಳ್ಳದಿರುವುದೇ ಬೇಸರದ ಸಂಗತಿಯಾಗಿದೆ.

ಕಾರ್ಖಾನೆ ನಂಬಿದ್ದ ರೈತರು:

ಕಾರಜೋಳ, ರೋಣಿಹಾಳ, ಕೊಲ್ಹಾರ, ಕುಬಕಡ್ಡಿ, ಮಲಘಾಣ, ಆಸಂಗಿ, ಮಟ್ಟಿಹಾಳ, ಮಸೂತಿ, ದೂಡಿಹಾಳ ಸೇರಿದಂತೆ ಬಬಲೇಶ್ವರ ತಾಲೂಕು, ಕೊಲ್ಹಾರ ತಾಲೂಕು, ಬಸವನ ಬಾಗೇವಾಡಿ ಹಾಗೂ ಸಿಂದಗಿ ತಾಲೂಕುಗಳಿಂದಲೂ ರೈತರು ಈ ಕಾರ್ಖಾನೆಗೆ ಕಬ್ಬು ಕಳಿಸುತ್ತಾರೆ. ಪ್ರತಿಬಾರಿ 10ರಿಂದ 12ಲಕ್ಷ ಟನ್ ಕಬ್ಬು ನುರಿಸುತ್ತಿದ್ದ ಕಾರ್ಖಾನೆ, ಸರಿಯಾದ ಸಮಯಕ್ಕೆ ಬಿಲ್ ಪಾವತಿಸದಿರುವುದರಿಂದ ಕಳೆದ ಬಾರಿ ರೈತರು ಕಡಿಮೆ ಪ್ರಮಾಣದಲ್ಲಿ ಕಬ್ಬು ಕಳಿಸಿರುವುದು ಕಂಡುಬಂದಿದೆ. ಹಾಗಾಗಿಯೇ 2023-24ನೇ ಸಾಲಿನಲ್ಲಿ ಕೇವಲ 7,27,800 ಟನ್ ಕಬ್ಬನ್ನು ಮಾತ್ರ ನುರಿಸಲಾಗಿದ್ದು, ಅದರಲ್ಲೂ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ.

ಕಾರ್ಖಾನೆ ಮೇಲೆ ಕ್ರಮಕ್ಕೆ ಮುಂದಾದ ಸರ್ಕಾರ:

ಶ್ರೀ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆಯವರು ಬಾಕಿ ಹಣ ₹68.44 ಕೋಟಿಗಳನ್ನು ನಿಗದಿತ ಅವಧಿಯಲ್ಲಿ ಪಾವತಿಸದೇ ಇರುವುದರಿಂದ ಸಕ್ಕರೆ (ನಿಯಂತ್ರಣ) ಆದೇಶ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಅಡಿಯಲ್ಲಿ ಈ ಸಕ್ಕರೆ ಕಾರ್ಖಾನೆಯವರಿಂದ ಭೂ ಬಾಕಿ ರೂಪದಲ್ಲಿ ಬಡ್ಡಿ ಸಮೇತ ವಸೂಲಾತಿ ಮಾಡಲು ಜಿಲ್ಲಾಧಿಕಾರಿಗಳ ವರದಿ ಮೇರೆಗೆ ಆಯುಕ್ತರು, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಆದೇಶ ಹೊರಡಿಸಿದ್ದಾರೆ.

--

ಕೋಟ್

ಸಕಾಲಕ್ಕೆ ಬಿಲ್ ಪಾವತಿ ಮಾಡುತ್ತೇವೆ ಎಂದು ಕಾರ್ಖಾನೆಯವರು ನೀಡುವ ಭರವಸೆಯ ಮೇಲೆ ನಾವು ಸಹ ಕಬ್ಬು ಕಳಿಸುತ್ತೇವೆ. ಕಬ್ಬು ಕಳಿಸಿ ಹದಿನೈದು ದಿನಗಳಲ್ಲಿ ಬಿಲ್ ಪಾವತಿ ಮಾಡುತ್ತೇವೆ ಎಂದವರು ಕಬ್ಬು ನುರಿಸಿದ ಬಳಿಕ ನಾಪತ್ತೆಯಾಗುತ್ತಾರೆ. ಮೊದಲಿನಿಂದಲೂ ಸರಿಯಾಗಿ ಬಿಲ್ ಕೊಡದೆ, ಪ್ರತಿಬಾರಿ ವಿಳಂಬ ನೀತಿ ಅನುಸರಿಸುತ್ತಾರೆ. ಕಾರ್ಖಾನೆ ಆಡಳಿತ ಮಂಡಳಿಯ ಮೇಲೆ ಸರ್ಕಾರ ಕ್ರಮ ಕೈಗೊಂಡು, ಆದಷ್ಟು ಬೇಗ ರೈತರಿಗೆ ಬಾಕಿ ಹಣ ಕೊಡಿಸಬೇಕು.

-ಶ್ರೀಶೈಲ ಬಾಡಗಿ, ಕಬ್ಬು ಬೆಳೆಗಾರರು.

--

ರೈತರ ಬಾಕಿ ಹಣ ₹70.80 ಕೋಟಿ (ಬಡ್ಡಿಸೇರಿ) ಪಾವತಿಸಲು ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿದ್ದರೂ ಕಾರ್ಖಾನೆಯವರು ಸ್ಪಂದಿಸಿಲ್ಲ. ಹೀಗಾಗಿ ಕಾರ್ಖಾನೆಯ ಆಸ್ತಿಗಳ ಭೂ ದಾಖಲೆಗಳಲ್ಲಿ ₹70.80 ಕೋಟಿ ಹಣವನ್ನು ಬೋಜಾ ದಾಖಲು ಮಾಡಿ ಗೇಣಿ ಮತ್ತು ಪಹಣಿ ಪತ್ರಿಕೆಗಳನ್ನು ಕಚೇರಿಗೆ ಸಲ್ಲಿಸುವಂತೆ ಬಬಲೇಶ್ವರ ತಹಸೀಲ್ದಾರರಿಗೆ ಆದೇಶಿಸಲಾಗಿದೆ. ಇದಕ್ಕೂ ಬಗ್ಗದೆ ನಿಗದಿತ ಅವಧಿಯಲ್ಲಿ ಹಣವನ್ನು ಪಾವತಿಸದೇ ಇದ್ದಲ್ಲಿ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು ಹರಾಜು ಮಾಡಲು ಕ್ರಮ ವಹಿಸಲಾಗುವುದು.

-ಟಿ.ಭೂಬಾಲನ್, ಜಿಲ್ಲಾಧಿಕಾರಿ.