ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯಾದ್ಯಂತ ರಸ್ತೆ ಗುಂಡಿಗಳನ್ನು ಮುಚ್ಚದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಬುಧವಾರ ವಿನೂತನವಾಗಿ ಪ್ರತಿಭಟಿಸಿದರು.ನಗರದ ಬಿಜೆಪಿ ವಿಕಾಸ ಭವನದಲ್ಲಿ ಸೇರಿದ ಕಾರ್ಯಕರ್ತರು ನಂತರ ಜಯಚಾಮರಾಜ ಒಡೆಯರ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಯಮಧರ್ಮ ಮತ್ತು ಚಿತ್ರಗುಪ್ತ ವೇಷಭೂಷಣದಲ್ಲಿ ಪಾಲ್ಗೊಂಡು ಸರ್ಕಾರವನ್ನು ಲೇವಡಿ ಮಾಡಿದರು.
ರಾಜ್ಯದ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬಿದ್ದು ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ಹಲವು ಸಾವು ನೋವುಗಳು ಸಂಭವಿಸಿವೆ. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಕಿಡಿಕಾರಿದರು.ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವ ಕಾರಣ ರಾಜ್ಯದಲ್ಲಿ ಯಾವುದೇ ರಸ್ತೆ ಅಭಿವೃದ್ಧಿಯೂ ನಡೆಯುತ್ತಿಲ್ಲ. ಕೊನೆ ಪಕ್ಷ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳನ್ನೂ ಸರಿಪಡಿಸುವತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಒಂದಲ್ಲ ಒಂದು ಕಡೆಯಲ್ಲಿ ರಸ್ತೆಗಳಲ್ಲಿರುವ ಗುಂಡಿಗಳಿಂದಾಗಿ ವಾಹನ ಸವಾರರು ಪ್ರತಿನಿತ್ಯ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಅಮಾಯಕ ಮಹಿಳೆಯರು, ಮಕ್ಕಳು ಸಾವಿಗೀಡಾಗುತ್ತಿರುವುದನ್ನು ನಿತ್ಯವೂ ನೋಡುತ್ತಿದ್ದೇವೆ. ಸರ್ಕಾರ ಮತ್ತು ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಎಷ್ಟೆ ಖರ್ಚು ಮಾಡಿದರೂ ಗುಂಡಿಗಳು ಮಾತ್ರ ಸರಿಪಡಿಸುತ್ತಿಲ್ಲ. ಇದರಿಂದ ಹಣ ಪೋಲಾಗುತ್ತಿದೆಯೇ ಹೊರತು ಯಾವುದೇ ರಸ್ತೆಗಳ ಸ್ಥಿತಿ ಬದಲಾವಣೆಯಾಗುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಗುಂಡಿಗಳ ಬಗ್ಗೆ ಕೇಳಿದರೆ ಹಿಂದಿನ ಸರ್ಕಾರ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿತ್ತು ಎಂದು ಇಲ್ಲಸಲ್ಲದ ಗೂಬೆ ಕೂರಿಸಲು ಯತ್ನಿಸುತ್ತಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದೆ. ಒಂದು ಕಡೆಯಿಂದ ಗುಂಡಿ ಮುಚ್ಚುತ್ತಿದ್ದರೆ, ಮತ್ತೊಂಡು ಕಡೆಗಳಲ್ಲಿ ಮುಚ್ಚಿರುವ ಕಳಪೆ ಗುಣಮಟ್ಟದ ಗುಂಡಿಗಳು ಬಾಯ್ದೆರೆದುಕೊಳ್ಳುತ್ತಿವೆ. ಆದರೂ ಈ ಸರ್ಕಾರಕ್ಕೆ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.ಇನ್ನಾದರೂ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುವ ಬದಲು ಈ ಕೂಡಲೇ ಬೆಂಗಳೂರಿನ ಎಲ್ಲಾ ಗುಂಡಿಗಳನ್ನ ಮುಚ್ಚಿ ಮರ್ಯಾದೆ ಉಳಿಸಿಕೊಳ್ಳಿ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದೆ ಜನರೇ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಉಪಾಧ್ಯಕ್ಷ ಶ್ರೀಧರ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಗ್ರಾಮಾಂತರ ಅಧ್ಯಕ್ಷ ಭೀಮೇಶ್, ವೈದ್ಯಕೀಯ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ಡಾ.ಸದಾನಂದ, ಮುಖಂಡರಾದ ಶಿವುಹೊಸಹಳ್ಳಿ, ರಾಶಿ ಸಿದ್ದರಾಜು, ಚಂದ್ರ, ಪುಟ್ಟರ್‌ಮಲ್ ಜೈನ್, ವಸಂತ್, ಸಿ.ಟಿ.ಮಂಜುನಾಥ್, ಸುರೇಶ್, ಶಿವಲಿಂಗಯ್ಯ, ಮನು, ಗೊರವಾಲೆ ಶಿವಣ್ಣ, ಆನಂದ್ ಹಲವರು ಪಾಲ್ಗೊಂಡಿದ್ದರು.