ಸಾರಾಂಶ
ಬೆಂಗಳೂರು : ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಭಾನುವಾರ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ರಾಜ್ಯಾಧ್ಯಕ್ಷರಾಗಿರುವ ಶಾಸಕ ಧೀರಜ್ ಮುನಿರಾಜು ಅವರ ನೇತೃತ್ವದ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ನೀಡಿತು.
ತರಾತುರಿಯಲ್ಲಿ ಆ.27ಕ್ಕೆ ಪರೀಕ್ಷೆ ನಿಗದಿಯಾಗಿರುವುದರಿಂದ ಅಭ್ಯರ್ಥಿಗಳಲ್ಲಿ ಗೊಂದಲವಾಗಿದೆ. ವಾರದ ದಿನ ಪರೀಕ್ಷೆ ನಡೆಸುತ್ತಿರುವುದರಿಂದ ದೂರದ ಊರಿನಿಂದ ಬರುವವರಿಗೆ, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ತೊಂದರೆ ಉಂಟಾಗಲಿದೆ. ರಾಜ್ಯ ಸರ್ಕಾರ ಮತ್ತು ಲೋಕಸೇವಾ ಆಯೋಗಕ್ಕೆ ಈ ಕುರಿತಂತೆ ಪರೀಕ್ಷಾರ್ಥಿಗಳು, ಜನಪ್ರತಿನಿಧಿಗಳು ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಸ್ಪಂದನೆ ದೊರೆಯದ ಕಾರಣ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರು ಸೇರಿದಂತೆ ಇತರೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೆಪಿಎಸ್ಸಿಗೆ ಪರೀಕ್ಷೆ ಮುಂದೂಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧೀರಜ್ ಮುನಿರಾಜು, ಪರೀಕ್ಷೆಯನ್ನು ವಾರಾಂತ್ಯದಲ್ಲಿ ನಡೆಸಬೇಕಿತ್ತು. ವಾರದ ದಿನ ನಡೆಸುವುದರಿಂದ ಅನೇಕರು ಪರೀಕ್ಷೆಯಿಂದ ವಂಚಿತರಾಗುತ್ತಾರೆ. ಕೆಪಿಎಸ್‌ಸಿ ವರ್ತನೆ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.