ಬಿಜೆಪಿಗರು ನಾಯಕರ ಹೆಸರಲ್ಲಿ ಮತ ಕೇಳುತ್ತಾರೆಯೇ ಹೊರತು ಸಾಧನೆಗಳಿಂದಲ್ಲ: ಜೆಪಿ ಹೆಗ್ಡೆ

| Published : Mar 30 2024, 12:49 AM IST

ಬಿಜೆಪಿಗರು ನಾಯಕರ ಹೆಸರಲ್ಲಿ ಮತ ಕೇಳುತ್ತಾರೆಯೇ ಹೊರತು ಸಾಧನೆಗಳಿಂದಲ್ಲ: ಜೆಪಿ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಬಿಲ್ಲವ ಸಮಾಜ ಮಂದಿರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಜಯಪ್ರಕಾಶ್‌ ಹೆಗ್ಸೆ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಡುಪಿ ಜಿಲ್ಲೆ ನಿರ್ಮಾಣ ಮಾಡಿದ ಬಳಿಕ ಜನರ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ. ಬಿಜೆಪಿಗರು ನಾಯಕರ ಹೆಸರಿನಲ್ಲಿ ಮತ ಕೇಳುತ್ತಾರೆಯೇ ಹೊರತು ಸಾಧನೆಗಳಿಗಲ್ಲ ಎಂದು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.ಅವರು ಶುಕ್ರವಾರ ಕಾರ್ಕಳ ಬಿಲ್ಲವ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಬಿಜೆಪಿ ಹತ್ತು ವರ್ಷಗಳಿಂದ ಅಡಕೆ ಹಳದಿ ರೋಗಕ್ಕೆ ಗೊರಖ್ ಸಿಂಗ್ ವರದಿಯನ್ನು ಅಂಗಿಕರಿಸುವ ಕೆಲಸವನ್ನು ಮಾಡಿಲ್ಲ. ಮಲೆನಾಡಿಗರ ಸಮಸ್ಯೆ ಬಗೆಹರಿಸುವ ಕೆಲಸವಾಗಿಲ್ಲ. ದೇಶದಲ್ಲಿ ಇಪ್ಪತ್ತು ಕೋಟಿ ಉದ್ಯೋಗ ನಿರ್ಮಾಣವಾಗಬೇಕಿತ್ತು‌. ಆದರೆ ಇನ್ನೂ ನಿರುದ್ಯೋಗವೇ ಹೆಚ್ಚಾಗಿದೆ. ತುಳು ಭಾಷೆಯನ್ನು ಏಳನೇ ಪರಿಚ್ಛೇದಕ್ಕೆ ಸೇರಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು ಎಂದರು.ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಕಾರ್ಕಳ ಗತಕಾಲದ ಕೊಡುಗೆ ಅಪಾರವಾಗಿದೆ. ಕಾರ್ಕಳ ಕ್ಷೇತ್ರ ಇಂದಿರಾ ಗಾಂಧಿ, ವೀರಪ್ಪ ಮೊಯ್ಲಿಯನ್ನು ಆರಿಸಿ ಕಳಿಸಿದ ಕ್ಷೇತ್ರವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದ ಸಮಯದಲ್ಲಿ ಕುಚ್ಚಲಕ್ಕಿ ನೀಡುತ್ತೇವೆ ಎಂದು ಕರಾವಳಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಯಾದರೆ ಅರ್ಧ ತಲೆಬೋಳಿಸುವುದಾಗಿ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಹೇಳಿದ್ದರು. ಕೊಪ್ಪ ಕಾಂಗ್ರೆಸ್ ಪಕ್ಷದ ವತಿಯಿಂದ ವಿವಿಧ ಬ್ರಾಂಡೆಡ್ ಬ್ಲೇಡ್‌ಗಳನ್ನು ಕಳುಹಿಸಿದ್ದರೂ ಕೂಡ ಮಾಜಿ ಜಿಲ್ಲಾಧ್ಯಕ್ಷರು ಮಾತನ್ನು ಉಳಿಸಿಕೊಂಡಿಲ್ಲ‌. ಬಿಜೆಪಿಯಲ್ಲಿ ಆಂತರಿಕ‌ ಕಲಹವೇ ಹೆಚ್ಚಾಗಿದೆ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ನಿರ್ನಾಮ ಮಾಡಲು ಸ್ವತಃ ಈಶ್ವರಪ್ಪನವರೇ ಹೊರಟಿದ್ದಾರೆ ಎಂದರು.ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು.ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ದೀಪಕ್ ಕೋಟ್ಯಾನ್, ಮಾರ್ಕ್ಸ್ ಡಿಸೋಜ, ಕಿರಣ್, ಅನಿತಾ ಡಿಸೋಜ, ರೋಶನ್, ಸದಾಶಿವ ದೇವಾಡಿಗ, ಕಿಶನ್ ಹೆಗ್ಡೆ ಕೊಳಕೆಬೈಲು, ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವ‌, ಎಂ.ಎಫ್. ಗಫೂರ್‌ ಮೊದಲಾದವರು ಉಪಸ್ಥಿತರಿದ್ದರು. ‌ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಸ್ವಾಗತಿಸಿದರು.

ಚಿತ್ರ: ಕಾರ್ಯಕ್ರಮ ಉದ್ಘಾಟಿಸುತ್ತಿರುವುದು