ನರೇಗಾ ಯೋಜನೆಯ ಕುರಿತು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಆಹ್ವಾನ ಮಾಡಿದ್ದರೆ ನಾವು ಸಹ ಸಿದ್ಧರಿದ್ದೇವೆ
ಕೊಪ್ಪಳ: ಗಾಂಧಿಯನ್ನು ನಾತೂರಾಮ ಗೋಡ್ಸೆ ಕೊಂದ ಬಳಿಕ ಬಿಜೆಪಿ ತಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆಗಳಿಗಿದ್ದ ಅವರ ಹೆಸರು ಅಳಿಸಿ ಹಾಕುವ ಮೂಲಕ ಮತ್ತೊಮ್ಮೆ ಹತ್ಯೆ ಮಾಡಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿರುವ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಗೆ ಬದಲಾವಣೆ ಮಾಡುವ ಮೂಲಕ ಹಳ್ಳ ಹಿಡಿಸಿದ್ದೂ ಅಲ್ಲದೆ ವಿಬಿ ಜೀ ರಾಮ್ ಜಿ ಎಂದು ನಾಮಕರಣ ಮಾಡುವ ಮೂಲಕ ಮಹಾತ್ಮ ಗಾಂಧೀಜಿ ಅವರನ್ನು ಮತ್ತೊಮ್ಮೆ ಹತ್ಯೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನರೇಗಾ ಯೋಜನೆಯ ಕುರಿತು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಆಹ್ವಾನ ಮಾಡಿದ್ದರೆ ನಾವು ಸಹ ಸಿದ್ಧರಿದ್ದೇವೆ, ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಬಡವರು, ಹಿಂದುಳಿದವರು ಮತ್ತು ದೀನದಲಿತರಿಗೆ ವರವಾಗಿರುವ ಖಾತ್ರಿ ಯೋಜನೆ ಹಳ್ಳ ಹಿಡಿಸಲಾಗಿದೆ ಮತ್ತು ಅದನ್ನು ವಿನಾಕಾರಣ ಹೆಸರು ಬದಲಾಯಿಸಲಾಗಿದೆ. ಬಡವರು, ಮಹಿಳೆಯರು ಮತ್ತು ದಲಿತರಿಗೆ ಅನುಕೂಲವಾಗುವ ಯೋಜನೆ ಬಂದ್ ಮಾಡುವುದೇ ಮುಖ್ಯ ಧ್ಯೇಯವಾಗಿದೆ. ಶೇ. 53ರಷ್ಟು ಮಹಿಳೆಯರು ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಮಾರ್ಪಾಡು ಮಾಡಿ, ಖಾಸಗಿಯವರ ಕೈಗೆ ಕೊಡುವ ಹುನ್ನಾರ ಎಂದು ಆರೋಪಿಸಿದರು.ಇದರಿಂದ ಗ್ರಾಪಂಗಳಿಗೆ ಅನ್ಯಾಯವಾಗಿದೆ. ಕೂಲಿಕಾರರ ಹೊಟ್ಟೆಗೆ ಹೊಡೆದಿದ್ದಾರೆ. ಇದರ ವಿರುದ್ಧ ನಾವು ದೇಶವ್ಯಾಪಿ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿಯೂ ಹಂತ ಹಂತವಾಗಿ ಹೋರಾಟ ಮಾಡಿ ಮತ್ತೆ ಹಿಂದಿನಂತೆ ಖಾತ್ರಿ ಯೋಜನೆ ಪ್ರಾರಂಭಿಸಬೇಕು ಮತ್ತು ಮಹಾತ್ಮ ಗಾಂಧೀಜಿ ಅವರ ಹೆಸರನ್ನೇ ಇಡಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.
ಕೇಂದ್ರದಲ್ಲಿ ಇರುವುದು ವೋಟ್ ಚೋರಿ ಸರ್ಕಾರ, ಅವರು ಎಲ್ಲಿಯೂ ಗೆದ್ದಿಲ್ಲ, ಮತಗಳ್ಳತನ ಮಾಡಿ ಅಧಿಕಾರದಲ್ಲಿದ್ದಾರೆ. ನ್ಯಾಯಯುತ ಚುನಾವಣೆ ನಡೆಸಿದರೆ ದಿಕ್ಕಿಲ್ಲದೆ ಹೋಗುತ್ತಾರೆ ಎಂದರು.ಅತಿಯಾದ ಬೆಂಬಲ ಇರುವ ಕೆಲವು ಕಡೆ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸುವುದಕ್ಕೆ ಅವಕಾಶ ನೀಡುತ್ತಾರೆ. ಉಳಿದೆಲ್ಲ ಕಡೆಯೂ ಇವಿಎಂ ಮೂಲಕವೇ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು.
ಸಮಸ್ಯೆಯಾಗಲು ಬಿಡಲ್ಲ:ಕೇರಳದಲ್ಲಿ ಕಾಸರಗೊಡು ಕನ್ನಡಿಗರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು. ಈಗಾಗಲೇ ಈ ವಿಷಯದಲ್ಲಿ ರಾಜ್ಯ ಸರ್ಕಾರ ಏನು ಮಾಡಬೇಕು ಎನ್ನುವುದನ್ನು ಗಂಭೀರವಾಗಿ ಚಿಂತನೆ ಮಾಡಿದ್ದೇವೆ ಮತ್ತು ಕೇರಳ ಮುಖ್ಯಮಂತ್ರಿಗಳು ಸಹ ಕಾಸರಗೋಡು ಕನ್ನಡಿಗರಿಗೆ ಅನ್ಯಾಯ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಕಾಸರಗೋಡ ಸೇರಿದಂತೆ ರಾಜ್ಯದ ಗಡಿ ಪ್ರದೇಶಗಳ ಸಮಸ್ಯೆ ಇತ್ಯರ್ಥ ಮಾಡುವ ದಿಸೆಯಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಶೈಲಜಾ ಹಿರೇಮಠ, ಜ್ಯೋತಿ ಗೊಂಡಬಾಳ, ಕೀಶೋರಿ ಬೋದನೂರು ಇದ್ದರು.ಬಿಜೆಪಿ ನಡೆ ಸರಿಯಲ್ಲ: ಬಳ್ಳಾರಿ ಬ್ಯಾನರ್ ವಿಷಯದಲ್ಲಿ ಬಿಜೆಪಿಯವರ ನಡೆ ಸರಿಯಿಲ್ಲ, ಬ್ಯಾನರ್ ಕಟ್ಟುವುದಕ್ಕೂ ವಿರೋಧ ಮಾಡುವುದ ಯಾವ ನ್ಯಾಯ? ಇದನ್ನು ನಾವು ಸಹಿಸುವುದಿಲ್ಲ. ಬ್ಯಾನರ್ ಕಟ್ಟುವ ವಿವಾದಕ್ಕಾಗಿ ಪಾದಯಾತ್ರೆ ಮಾಡುವುದಾದರೆ ಅದಕ್ಕೇನು ಅರ್ಥವಿದೆ? ಎಂದು ಹೇಳಿದರು.
ಹಿಟ್ನಾಳ ಗೇಟ್ ನಿರ್ಮಾಣದ ಭೂಮಿಪೂಜೆಯಲ್ಲಿ ಕೇಂದ್ರ ಸಚಿವರು ಶಿಷ್ಟಾಚಾರ ಪಾಲನೆ ಮಾಡಲಿಲ್ಲ. ತಮ್ಮ ಮಾತನ್ನು ಅಧಿಕಾರಿಗಳೇ ಕೇಳುತ್ತಿಲ್ಲ ಎಂದು ಅವರೇ ಹೇಳಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.