ಕನಿಷ್ಠ ಬಜೆಟ್‌ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿಡಬೇಕಾದರೂ ಸರ್ಕಾರ ಅದನ್ನು ಮಾಡಿಲ್ಲ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬೆಂಗಳೂರಿನ ಹೆಬ್ಬಾಳ ನಾಗವಾರ ಕೆರೆಯ ಸಂಸ್ಕರಿಸಿದ ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಲು ಹಲವು ವರ್ಷಗಳಿಂದ ವಿವಿಧ ಸಂಘಟನೆಗಳು, ನೀರಾವರಿ ಹೋರಾಟಗಾರರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಸರ್ಕಾರ ಇದಕ್ಕೆ ಅಗತ್ಯವಾದ ಇಚ್ಛಾಶಕ್ತಿಯನ್ನು ತೋರಿಸಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆರೋಪಿಸಿದರು.ನಗರದ ಉತ್ತರ ಬಡಾವಣೆ ನೂತನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಿಷ್ಠ ಬಜೆಟ್‌ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿಡಬೇಕಾದರೂ ಸರ್ಕಾರ ಅದನ್ನು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಿನ ದಿನಗಳಲ್ಲಿ ಬಿಜೆಪಿಯು ಚಿಕ್ಕಬಳ್ಳಾಪುರ,ಕೋಲಾರ, ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಯಕರು ಒಳಗೊಂಡಂತೆ, ಬಿಜೆಪಿಯಿಂದ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಬಯಲು ಸೀಮೆಯ ಜಿಲ್ಲೆಗಳ ಬಂದ್ ಮಾಡಿ ಇನ್ನಷ್ಟು ಹೋರಾಟಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.ಜನರ ಆರೋಗ್ಯದ ದೃಷ್ಟಿಯಿಂದ ಮೂರನೇ ಹಂತದ ಶುದ್ಧೀಕರಣ ಅತ್ಯಗತ್ಯವಾಗಿದೆ.ಈ ವಿಚಾರವನ್ನು ಒತ್ತಾಯಿಸಿ ಇದೇ ಭಾನುವಾರ ಚಿಕ್ಕಬಳ್ಳಾಪುರ ಬಂದ್‌ಗೆ ಕರೆ ನೀಡಲಾಗಿದ್ದು, ಅದಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಈ ಕಾರಣದಿಂದ ಭಾನುವಾರ ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನೂತನ ಕಚೇರಿಯ ಉದ್ಘಾಟನೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.
ಯಾವುದೇ ಪ್ರತಿಭಟನೆ ಅಥವಾ ಧರಣಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಡೆಯಬೇಕು. ಆದರೆ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿ ಭಾನುವಾರ ಬಂದ್ ಕರೆ ನೀಡಿರುವುದು ಗಮನಾರ್ಹವಾಗಿದೆ. ಆ ದಿನ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದರೂ ನೀರಿನ ಸಮಸ್ಯೆಯ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್ಎಸ್ ಮುರಳಿಧರ್, ಕೊಂಡೇನಹಳ್ಳಿ ಕೆ.ಬಿ ಮುರಳಿ, ಮಧು ಸೂರ್ಯನಾರಾಯಣ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಪರಿಷತ್ ಸದಸ್ಯ ಎ.ಬಿ. ಬೈರೇಗೌಡ. ಜಿಲ್ಲಾ ಕಾರ್ಯದರ್ಶಿ ಅಶೋಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಲಕ್ಷ್ಮಿಪತಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿ. ಮಧುಚಂದ್ರ,ನೂತನ ಜಿಲ್ಲಾ ಮಂಡಲ ಅಧ್ಯಕ್ಷರಾದ ಪ್ರಭಾಕರ್ ರೆಡ್ಡಿ, ಸೀಕಲ್ ಆನಂದ್ ಗೌಡ, ದೇವರಾಜ್, ತೇಜೇಂದ್ರ ಪಾಪು, ವೇಣು ಮಾಧವ್, ಕೋಡಿರ್ಲಪ್ಪ, ಗೋವಿಂದರಾಜು, ಬಾಗೇಪಲ್ಲಿ ಪ್ರತಾಪ್, ಗಂಗರೆಡ್ಡಿ ಇದ್ದರು.
ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ಮಾತನಾಡಿದರು.