ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಜಿಲ್ಲೆಯ ಹಾಲಿ ಸಂಸದ, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗುರುವಾರ ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಕ್ಷೇತ್ರದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಬಿ.ಫಾರಂಗೆ ಸನ್ನಿಧಾನದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.ಪತ್ನಿ ತೇಜಸ್ವಿನಿ ಜತೆಗೆ ಬೆಳಿಗ್ಗೆ 8ರ ವೇಳೆಯಲ್ಲಿ ಶಿವಮೊಗ್ಗದಿಂದ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು.ನಂತರದಲ್ಲಿ ಬಿ.ಫಾರಂ ನ್ನು ಪ್ರಾಣದೇವತೆ ಶ್ರೀ ಹುಚ್ಚುರಾಯಸ್ವಾಮಿಯ ಗರ್ಭಗುಡಿಯಲ್ಲಿರಿಸಿ ಪ್ರಧಾನ ಅರ್ಚಕ ಉಮೇಶ್ ಭಟ್ ನೇತೃತ್ವದಲ್ಲಿ ಹಲವು ಋತ್ವಿಜರು ವಿಪ್ರ ಸಮುದಾಯದ ಮುಖಂಡರ ಸಮಕ್ಷಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು ನಂತರದಲ್ಲಿ ಸಮೀಪದಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಬೃಂದಾವನದ ದರ್ಶನಾಶೀರ್ವಾದ ಪಡೆದು ಫಲ ಮಂತ್ರಾಕ್ಷತೆ ಸ್ವೀಕರಿಸಿದರು.
ನಂತರದಲ್ಲಿ ತಾಲೂಕಿನ ಮುಗುಳುಗೆರೆ ಗ್ರಾಮದಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಧಾವಿಸಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ದೇವಸ್ಥಾನ ಸಮಿತಿ ಸದಸ್ಯರು ಗ್ರಾಮಸ್ಥರು ಸಂಸದರಿಗೆ ಕಂಬಳಿ ಹೊದಿಸಿ ಕುರಿಮರಿಯನ್ನು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಾಜಿ ರುದ್ರೇಗೌಡ , ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಜಿ.ಪಂ. ಮಾಜಿ ಸದಸ್ಯ ಕೆ.ಹಾಲಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರದ ಹನುಮಂತಪ್ಪ, ಉಪಾಧ್ಯಕ್ಷ ವಸಂತಗೌಡ, ನಗರಾಧ್ಯಕ್ಷ ಎಸ್.ಎಸ್. ರಾಘವೇಂದ್ರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿದೇವಿ, ಮುಖಂಡ ನಿಂಬೆಗೊಂದಿ ಸಿದ್ದಲಿಂಗಪ್ಪ, ಬೆಣ್ಣೆ ಪ್ರವೀಣ, ಗಿರೀಶ್ ಹರಳೆಣ್ಣೆ, ಹರಳೆಣ್ಣೆ ಹುಚ್ರಾಯಪ್ಪ, ಬೂದೆಪ್ಪ, ಬಸವರಾಜ್, ಪುರಸಭಾ ಸದಸ್ಯ ಪಾಲಾಕ್ಷಪ್ಪ, ಅಪರ್ಣಾ ಗುರುಮೂರ್ತಿ, ಪ್ರಮೀಣ ಶೆಟ್ಟಿ, ದೀಪು ದೀಕ್ಷಿತ್ ಋತ್ವಿಜರಾದ ವೆಂಕಟೇಶ್, ಗಣಪತಿ ಭಟ್, ಗಿರೀಶ್ ಭಟ್, ಹರೀಶ್ ಜೋಯ್ಸ್, ಅಂಜನಾ ಭಟ್, ನರಸಿಂಹ ಜೋಯ್ಸ್ ಮತ್ತಿತರರು ಹಾಜರಿದ್ದರು.