ಪಂಚ ರಾಜ್ಯಗಳ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಸಾಧಿಸಿದ ಹಿನ್ನೆಲೆ ಸೋಮವಾರ ಜಗಳೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಮರುಳಾರಾದ್ಯ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ.

- ಎಚ್.ಪಿ. ರಾಜೇಶ್ ಅಭಿಮತ । ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಸಂಭ್ರಮಾಚರಣೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಪಂಚ ರಾಜ್ಯಗಳ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಸಾಧಿಸಿದ ಹಿನ್ನೆಲೆ ಸೋಮವಾರ ಜಗಳೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಮರುಳಾರಾದ್ಯ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ದೇಶದ ಗಮನ ಪಂಚರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಕಡೆ ಇತ್ತು. ಇದರಲ್ಲಿ ಬಿಜೆಪಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದು, ಅಧಿಕಾರ ಹಿಡಿಯಲಿದೆ. ಈ ಗೆಲವು ಮುಂದೆ ಕರ್ನಾಟದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ದಿಕ್ಸೂಚಿಯಾಗಲಿದೆ. ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಪ್ರಧಾನ ಮಂತ್ರಿ ಮೋದಿ ಅವರ ಉತ್ತಮ ಆಡಳಿತ, ಅಮಿತ್ ಷಾ ಅವರ ಚುನಾವಣೆ ರಣನೀತಿಯಿಂದ ಪಕ್ಷಕ್ಕೆ ಗೆಲುವು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಬಿಜೆಪಿ ಸೋತಿಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ನೈತಿಕ ಗೆಲುವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಅಂತರದ ಮತಗಳಿಂದಷ್ಟೆ ಗೆಲುವು ಪಡೆದಿದ್ದಾರೆ. ನಿಜವಾಗಿಯೂ ದಾವಣಗೆರೆಯ ಮತದಾರರ ಬೆಂಬಲಿಸಿದ್ದಾರೆ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ ಮಾತನಾಡಿ, ಮತದಾರರ ಮನಸ್ಸು ಮಾಡಿದರೆ ಏನೆಲ್ಲ ಬದಲಾವಣೆ ಮಾಡಲು ಸಾಧ್ಯ ಎನ್ನುವುದಕ್ಕೆ ಪಶ್ಚಿಮ ಬಂಗಾಳವೇ ಸಾಕ್ಷಿಯಾಗಿದೆ. ಅಲ್ಲಿನ ದುರಾಡಳಿತ, ದೌರ್ಜನ್ಯದಿಂದ ಜನರು ಬೇಸತ್ತಿದ್ದರು. ಅಲ್ಲದೇ ಬಾಂಗ್ಲಾ ನುಸುಳುಕೋರರಿಗೆ ಅವಕಾಶ ನೀಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಆಡಳಿತ ತಡೆಹಿಡಿಯುವ ಮೂಲಕ ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದೆ. ಆದ್ದರಿಂದ ಈ ಬಾರಿ ಮೂರು ರಾಜ್ಯಗಳಲ್ಲೂ ಭರ್ಜರಿ ಜಯಕಂಡಿದೆ ಎಂದರು.

ಈ ಸಂದರ್ಭ ಮಾಜಿ ಪಪಂ ಅಧ್ಯಕ್ಷ ಜೆ.ವಿ. ನಾಗರಾಜ್, ಮುಖಂಡರಾದ ಬಿಸ್ತುವಳ್ಳಿ ಬಾಬು, ಬಿಜೆಪಿ ಕಾರ್ಯದರ್ಶಿ ಶಿವು ಲ್ಯಾಬ್, ತಾಪಂ ಮಾಜಿ ಸದಸ್ಯ ಸೂರಲಿಂಗಪ್ಪ, ಬಾಬು, ಆಯಿಲ್ ಬಾಬು, ಹೊನ್ನಮರಡಿ ಬಾಲರಾಜ್, ತಮಲೇಹಳ್ಳಿ ಮಾರುತಿ, ಶ್ರೀನಿವಾಸ್, ಕೆಂಚಮ್ಮ ಧನ್ಯಕುಮಾರ್, ವಿಕ್ರಮ್, ಹೊನ್ನೂರಸ್ವಾಮಿ, ಓಬಳೇಶ್, ನರಸಿಂಹಮೂರ್ತಿ, ಉಮೇಶ್, ಬಸವರಾಜ್ ಮತ್ತಿತ್ತರರಿದ್ದರು.

- - -

-04ಜೆ.ಜಿ.ಎಲ್.2:

ಜಗಳೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಮರುಳಾರಾಧ್ಯ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಮ್ಮುಖ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.