ಬಿಜೆಪಿ ಅಭ್ಯರ್ಥಿ ಆಯ್ಕೆಗೆ ದಿಲ್ಲಿಯಲ್ಲಿ ಕಸರತ್ತು

| Published : Mar 07 2024, 01:49 AM IST / Updated: Mar 07 2024, 09:57 AM IST

bjp emblem flag logo

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ದೆಹಲಿಯಲ್ಲಿ ಬುಧವಾರ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ನವದೆಹಲಿ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ದೆಹಲಿಯಲ್ಲಿ ಬುಧವಾರ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಿತು.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿ.ಎಲ್‌. ಸಂತೋಷ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಪಾಲ್ಗೊಂಡಿದ್ದರು. 

ಸಭೆಯಲ್ಲಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ.

ರಾಜ್ಯ ಬಿಜೆಪಿ ನಾಯಕರು ತಮ್ಮದೇ ಆದ ಸರ್ವೇ ಹಾಗೂ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ತಯಾರಿಸಿರುವ ಶಿಫಾರಸ್ಸು ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದರು. 

ಒಂದೊಂದು ಕ್ಷೇತ್ರಕ್ಕೆ ಎರಡು-ಮೂರು ಹೆಸರುಗಳನ್ನು ಚರ್ಚೆ ಮಾಡಲಾಗಿದೆ. ಅಲ್ಲದೆ, ಒಬ್ಬ ಅಭ್ಯರ್ಥಿಯ ಹೆಸರನ್ನು ಎರಡು-ಮೂರು ಕ್ಷೇತ್ರಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾವೇರಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಕಾಂತೇಶ್ ( ಈಶ್ವರಪ್ಪ ಅವರ ಪುತ್ರ), ವಕೀಲ ಸಂದೀಪ್ ಪಾಟೀಲ್ ಹೆಸರುಗಳು ಚರ್ಚೆಯಾದರೆ, ಬೆಳಗಾವಿ ಕ್ಷೇತ್ರಕ್ಕೆ ಶ್ರದ್ದಾ ಶೆಟ್ಟರ್, ಮಾಜಿ ಶಾಸಕ ಸಂಜಯ್ ಪಾಟೀಲ್ ಹೆಸರುಗಳು ಚರ್ಚೆಯಾದವು. 

ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಹಾಗೂ ಅಪ್ಪಚ್ಚು ರಂಜನ್‌, ಹುಬ್ಬಳ್ಳಿ- ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್, ಉತ್ತರ ಕನ್ನಡಕ್ಕೆ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ, ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಹರಿಪ್ರಕಾಶ್ ಕೋಣೆಮನೆ,

 ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರಕ್ಕೆ ಸದಾನಂದ ಗೌಡ, ಸಿ.ಟಿ.ರವಿ, ಬೆಂಗಳೂರು ದಕ್ಷಿಣಕ್ಕೆ ಹಾಲಿ ಸಂಸದ ತೇಜಸ್ವಿ ಸೂರ್ಯ, ತುಮಕೂರು ಕ್ಷೇತ್ರಕ್ಕೆ ವಿ.ಸೋಮಣ್ಣ, ಮಾಧುಸ್ವಾಮಿ, ದಾವಣಗೆರೆ ಕ್ಷೇತ್ರಕ್ಕೆ ಜಿ.ಎಂ.ಸಿದ್ದೇಶ್ವರ್‌. 

ಬೆಂಗಳೂರು ಗ್ರಾಮಾಂತರಕ್ಕೆ ಸಿ.ಪಿ.ಯೋಗೇಶ್ವರ್, ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕಟೀಲ್‌ ಹಾಗೂ ಬ್ರಿಜೇಶ್ ಚೌಟ ಹೆಸರುಗಳು ಚರ್ಚೆಗೆ ಬಂದವು ಎಂದು ಮೂಲಗಳು ತಿಳಿಸಿವೆ.

ಅಂತಿಮವಾಗಿ, ಈ ಪಟ್ಟಿಯನ್ನು ಮಾರ್ಚ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಿಇಸಿ (ಸೆಂಟ್ರಲ್‌ ಎಲೆಕ್ಷನ್‌ ಕಮಿಷನ್‌) ಸಭೆಯಲ್ಲಿ ಚರ್ಚಿಸಿ, ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.