ಹುರುಕು ಮನೆಯಲ್ಲಿ ಬಡಕುಟುಂಬದ ದಯನೀಯ ಬದುಕು

| Published : Mar 07 2024, 01:48 AM IST

ಸಾರಾಂಶ

ದಲಿತ ಸಮುದಾಯಕ್ಕೆ ಸೇರಿದ ಈ ಕುಟುಂಬಕ್ಕೆ ಕೌಟುಂಬಿಕವಾಗಿ ಬಳುವಳಿಯಾಗಿ ಬಂದ 32 ಸೆಂಟ್ಸ್ ಜಮೀನು‌ ಇದೆ. ಆದರೆ ಮನೆಯ ದುರಾವಸ್ಥೆ ಈ ದಂಪತಿಯ ಮನಸ್ಸಿನ ನೆಮ್ಮದಿಯನ್ನೂ ಕಸಿದುಕೊಂಡಿದ್ದು, ಕಳೆದ ಕೆಲವು ಸಮಯದಿಂದ ಸಂಬಂಧಿಕರ ಮನೆಯಲ್ಲಿ ರಾತ್ರಿ ಕಳೆಯುವಂತೆ ಮಾಡಿದೆ.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ ಅದೊಂದು ಮನೆಯಂತೆ..! ಮೇಲ್ಛಾವಣಿಯ ಶೇ.80 ರಷ್ಟು ಹಂಚುಗಳು ನೆಲಕ್ಕೆ ಬಿದ್ದಿದೆ, ರೀಪು ಪಕ್ಕಾಸುಗಳು ನೇತಾಡುತ್ತಿದೆ, ಇವೆಲ್ಲ ಯಾವಾಗ ತಮ್ಮ ತಲೆಯ ಮೇಲೆ ಬೀಳುತ್ತದೆಯೋ ಎಂಬ ಆತಂಕದಲ್ಲಿ ದಂಪತಿಯೊಂದು ಅದೇ ಪಾಳು‌ಮನೆಯಲ್ಲಿ‌‌ ದಿನದೂಡುತ್ತಿದೆ.

ಈ ಭಯಾನಕ‌ ಸನ್ನಿವೇಶದಲ್ಲಿ ಬದುಕುತ್ತಿರುವವರು ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಲಕ್ಕಪ್ಪಕೋಡಿ ನಿವಾಸಿಗಳಾದ ವಾಸು ಮತ್ತು ಗೀತಾ ದಂಪತಿ. ಒಂದೆಡೆ ಪತಿಯ ಅನಾರೋಗ್ಯ, ಇನ್ನೊಂದೆಡೆ ಹುರುಕು ಮನೆ ಮಕ್ಕಳಿಲ್ಲದ ದಂಪತಿಯನ್ನು ದಯನೀಯ ಬದುಕಿನತ್ತ ದೂಡಿದೆ.

ದಲಿತ ಸಮುದಾಯಕ್ಕೆ ಸೇರಿದ ಈ ಕುಟುಂಬಕ್ಕೆ ಕೌಟುಂಬಿಕವಾಗಿ ಬಳುವಳಿಯಾಗಿ ಬಂದ 32 ಸೆಂಟ್ಸ್ ಜಮೀನು‌ ಇದೆ. ಆದರೆ ಮನೆಯ ದುರಾವಸ್ಥೆ ಈ ದಂಪತಿಯ ಮನಸ್ಸಿನ ನೆಮ್ಮದಿಯನ್ನೂ ಕಸಿದುಕೊಂಡಿದ್ದು, ಕಳೆದ ಕೆಲವು ಸಮಯದಿಂದ ಸಂಬಂಧಿಕರ ಮನೆಯಲ್ಲಿ ರಾತ್ರಿ ಕಳೆಯುವಂತೆ ಮಾಡಿದೆ.ನಳ್ಳಿ ಸಂಪರ್ಕವಿಲ್ಲ- ನೀರಿಗೆ ತತ್ವಾರ..!:

ಒಂದೆಡೆ ಸರ್ಕಾರಗಳು ಮನೆಮನೆಗೆ ನಳ್ಳಿಸಂಪರ್ಕ ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಅದಿನ್ನೂ ಈ ಮನೆಗೆ ತಲುಪಿಲ್ಲ. ಮನೆ ಮನೆ ಗಂಗೆ ಯೋಜನೆ ಈ ಮನೆಗೆ ಇನ್ನೂ ತಲುಪದ ಹಿನ್ನೆಲೆ, ಕುಡಿಯುವ ನೀರು, ಸ್ನಾನ ಸಹಿತ ಎಲ್ಲ ಕೆಲಸಗಳಿಗೂ ಹತ್ತಿರದ ಮನೆಯಿಂದ ನೀರು ಹೊತ್ತು ತರಬೇಕಾದ ಸ್ಥಿತಿ ಎದುರಾಗಿದೆ. ಪ್ರತಿದಿನ ಬೆಳಗ್ಗೆ ಮಾಣಿ ಗ್ರಾ.ಪಂ. ಕಚೇರಿಯಲ್ಲಿ ಶುಚಿತ್ವದ ಕೆಲಸ ನಿರ್ವಹಿಸುವ ಗೀತಾ ಹಲವು ಬಾರಿ ನೀರಿನ ಸಂಪರ್ಕದ ಬಗ್ಗೆ ಗ್ರಾ.ಪಂ.ನಲ್ಲಿ ಗೋಗರೆದಿದ್ದರೂ, ನಳ್ಳಿ ಸಂಪರ್ಕ ಈವರೆಗೂ ಸಿಕ್ಕಿಲ್ಲ, ಖಾಲಿ ಟಾಂಕಿಯೊಂದನ್ನು ಕೊಟ್ಟಿದ್ದಾರೆ ಎನ್ನುತ್ತಾರೆ ಗೀತಾ. ಧೃತಿಗೆಟ್ಟಿರುವ ಗೀತಾ..: ಪತಿಯ ಅನಾರೋಗ್ಯದ ನಡುವೆ, ಮನೆಯ ಪರಿಸ್ಥಿತಿ, ಕಿತ್ತು ತಿನ್ನುತ್ತಿರುವ ಬಡತನದಿಂದಾಗಿ ಗೀತಾ ಮಾನಸಿಕವಾಗಿ ನೊಂದುಕೊಂಡಿದ್ದಾರೆ. ಛಾವಣಿ ಸರಿ‌ ಇಲ್ಲದ ಮನೆಯೊಳಗೆ ತರೆಗೆಲೆಗಳು ಬೀಳುತ್ತಿದ್ದು, ಮನೆಯೊಳಗೆ ಒಲೆಯಲ್ಲಿ ಅಡಿಗೆ ಮಾಡಿಕೊಳ್ಳುತ್ತಿದ್ದಾರೆ. ಪಂಚಾಯಿತಿಯ ಶುಚಿತ್ವದ ಕೆಲಸಕ್ಕೆ ಮಾಸಿಕ 1500 ರು. ಹಾಗೂ ಕೆಲವು ತಿಂಗಳಿಂದ ಗೃಹಲಕ್ಷ್ಮೀಯ ಮಾಸಿಕ‌ 2000 ರು, ಸೊಸೈಟಿ ಅಕ್ಕಿ ಇವರ ಜೀವನಕ್ಕೆ ಆಧಾರವಾಗಿದೆ. ರಾತ್ರಿ ಅಗತ್ಯವಿಲ್ಲದ, ಹಗಲು ಉಪಯೋಗಕ್ಕಿಲ್ಲದ ವಿದ್ಯುತ್ ಉಚಿತವಾಗಿದೆ.

ಇದ್ದ ಶೌಚಾಲಯ ಕುಸಿದುಬಿದ್ದ ಕಾರಣ ಪಂಚಾಯಿತಿ ನೆರವಿನಿಂದ ಕಟ್ಟಲಾದ ಶೌಚಾಲಯಕ್ಕೆ ನೀರಿನ‌ ಸಂಪರ್ಕವೇ ಇಲ್ಲದಂತಾಗಿದೆ. ನೀರು ಹೊತ್ತು ತರಬೇಕಾಗಿದೆ ಮಾತ್ರವಲ್ಲ ಅಲ್ಲಿಯೆ ಸ್ನಾನ ಅನಿವಾರ್ಯವಾಗಿದೆ..!

ಲಕ್ಕಪ್ಪಕೋಡಿ ಶಿವಶಂಕರ ಭಟ್ ಸಹಿತ ಆಸುಪಾಸಿನ ತೋಟಗಳ ಕೂಲಿಕೆಲಸಕ್ಕೆ ಗೀತಾ ಹೋಗುತ್ತಾರೆ. ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯ ಉದ್ಯೋಗ ಅಗತ್ಯವಿದೆ ಎನ್ನುತ್ತಾರೆ ಶಿವಶಂಕರ ಭಟ್.ಗುಡಿಸಲು ಮುಕ್ತ ಬಂಟ್ವಾಳವಾಗಿತ್ತು..ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿಯವರು ಬಂಟ್ವಾಳದ ಶಾಸಕರಾಗಿದ್ದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಮುಳಿಹುಲ್ಲಿನ ಮನೆಗಳಿರಬಾರದು, ತನ್ನ ಅವಧಿಯಲ್ಲಿ ಎಲ್ಲರಿಗೂ ಸುಸಜ್ಜಿತ ಮನೆ ಒದಗಿಸಿ, ಗುಡಿಸಲು ಮುಕ್ತ ಬಂಟ್ವಾಳ ಮಾಡುವ ಪಣ ತೊಟ್ಟು ಅದರಂತೆ ನಡೆದುಕೊಂಡಿದ್ದರು. ಈಗಿನ ಸಮಸ್ಯೆಯೇ ಬೇರೆಯಾಗಿದ್ದು, ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಅವರು ಈ ಬಗ್ಗೆ ಗಮನಹರಿಸಿ, ಸರ್ಕಾರದ ಸೌಕರ್ಯ ಒದಗಿಸಿ ಬಡದಂಪತಿಯ ಬದುಕಿಗೆ ಬೆಳಕು ನೀಡಬೇಕಾಗಿದೆ.ಸರ್ಕಾರದ ಸೌಲಭ್ಯಗಳನ್ನು ಈ ಕುಟುಂಬಕ್ಕೆ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಬೇಕು, ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಬಪ್ಪುಕೋಡಿ ನಾರಾಯಣ ಭಟ್.ತಮ್ಮ ದಯನೀಯ ಸ್ಥಿತಿ ಬಗ್ಗೆ ಮಾತನಾಡಿದ ಗೀತಾ, ಗಂಡನಿಗೆ ಅನಾರೋಗ್ಯವಿದ್ದು, ನಾನೊಬ್ಬಳೇ ದುಡಿಯಬೇಕು, ಮನೆ ರಿಪೇರಿಯಾದರೆ ನೆಮ್ಮದಿ ಇರುತ್ತಿತ್ತು ಎನ್ನುತ್ತಾರೆ.