ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಸಹಿಸಲಾಗದ ಬಿಜೆಪಿ

| Published : Nov 29 2024, 01:00 AM IST

ಸಾರಾಂಶ

ರಾಮನಗರ: ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಸಹಿಸದ ಬಿಜೆಪಿ ನಾಯಕರು ಅನರ್ಹರ ಪಡಿತರ ಚೀಟಿ ರದ್ದು ಮತ್ತು ವಕ್ಫ್ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ವಾಗ್ದಾಳಿ ನಡೆಸಿದರು.

ರಾಮನಗರ: ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಸಹಿಸದ ಬಿಜೆಪಿ ನಾಯಕರು ಅನರ್ಹರ ಪಡಿತರ ಚೀಟಿ ರದ್ದು ಮತ್ತು ವಕ್ಫ್ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ರಾಜಕೀಯ ಕುತಂತ್ರಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಿದ್ದಾರೆ. 7.5 ಎಕರೆಗೂ ಹೆಚ್ಚು ಭೂಮಿ, ವಾರ್ಷಿಕ 1.20 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ಆದಾಯ ತೆರಿಗೆ ಪಾವತಿಸುತ್ತಿರುವ ಕುಟುಂಬಗಳು, ಜಿಎಸ್‌ಟಿ ನೋಂದಣಿ ಇರುವ ಕುಟುಂಬಗಳಿಗೆ ಪಡಿತರ ಚೀಟಿಯನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರೆಡಿಸಿದೆ. ಈ ಮಾರ್ಗಸೂಚಿಗಳನ್ವಯ ಬಿಪಿಎಲ್ ಪಡಿತರ ರದ್ದಾಗಿದೆ. ಆದರೆ, ಅರ್ಹ ಕುಟುಂಬಗಳ ಪಡಿತರ ಚೀಟಿಗಳನ್ನು ಪುನಃ ಊರ್ಜಿತಗೊಳಿಸಲಾಗತ್ತಿದೆ. ಆದರೆ, ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರ ಪಡಿತರ ಚೀಟಿ ರದ್ದು ಮಾಡುತ್ತಿದೆ ಎಂದು ಜನ ಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಟೀಕಿಸಿದರು.

ರಾಮನಗರ ಜಿಲ್ಲೆಯಲ್ಲಿ 11 ಸಾವಿರ ಪಡಿತರ ಚೀಟಿಗಳನ್ನು ರದ್ದಾಗಿದ್ದವು. ಈ ಪೈಕಿ 10 ಸಾವಿರ ಪಡಿತರ ಚೀಟಿಗಳನ್ನು ಜಿಲ್ಲಾಡಳಿತ ಪುನಃ ಊರ್ಜಿತಗೊಳಿಸಲಾಗಿದೆ. ಉಳಿದವುಗಳ ಪೈಕಿ ಕೆಲವರು ಸರ್ಕಾರಿ ಸಿಬ್ಬಂದಿ, ಆದಾಯ ತೆರಿಗೆ ಪಾವತಿಸುತ್ತಿರುವವರು ಇದ್ದಾರೆ. ಇದನ್ನು ಪುನಃ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿದ್ದಾರೆ. ಜನರು ಐದು ಗ್ಯಾರಂಟಿ ಯೋಜನೆಗಳನ್ನು ಒಪ್ಪಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ಸುಳ್ಳು ಸುದ್ದಿ ಹರಡಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಬಿಜೆಪಿ ಮತ್ತು ವಿರೋಧ ಪಕ್ಷಗಳಿಗೆ ತಕ್ಕ ಬುದ್ದಿ ಕಲಿಸಿದ್ದಾರೆ ಎಂದರು.

ವಕ್ಫ್ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆದರೂ ಬಿಜೆಪಿ ನಾಯಕರು ಸುಳ್ಳು ಹೇಳುತ್ತ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷಗಳ ನಾಯಕ ಆರ್.ಅಶೋಕ್ ವಿರುದ್ಧ ಬಿಜೆಪಿ ನಾಯಕರೇ ಲೇವಡಿ ಮಾಡುತ್ತಿದ್ದಾರೆ. ಅನ್ ಫಿಟ್ ವಿರೋಧ ಪಕ್ಷದ ನಾಯಕ ಎಂದು ಟೀಕಿಸುತ್ತಿದ್ದಾರೆ. ಇನ್ನೊಂದೆಡೆ ಬಿ.ವೈ.ವಿಜಯೇಂದ್ರ ಬಗ್ಗೆಯೂ ಬಿಜೆಪಿ ನಾಯಕ ಯತ್ನಾಳ್ ಟೀಕಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಅರ್ಹತೆಯುಳ್ಳ ಶೇ. 99ರಷ್ಟು ಮಹಿಳೆಯರ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗುತ್ತಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2,479 ಮಂದಿ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಮಂದಿ ಈ ಯೋಜನೆಗೆ ಅರ್ಹರಿದ್ದಾರೆ ಎಂಬುದು ತಮ್ಮ ಅನಿಸಿಕೆ ಎಂದು ಪ್ರಶ್ನೆಯೊಂದಕ್ಕೆ ಕೆ.ರಾಜು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಉಪಾಧ್ಯಕ್ಷರಾದ ಶೇಖರ್, ಶಂಕರ್, ಮಹದೇಶ್, ತಾಲೂಕು ಅಧ್ಯಕ್ಷರಾದ ಎಚ್.ಎನ್.ಅಶೋಕ್, ವಿ.ಎಚ್.ರಾಜು, ಕಲ್ಕೆರೆ ಶಿವಣ್ಣ, ಶಿವಮಾದಯ್ಯ ಸದಸ್ಯರಾದ ಶೋಭಾ, ಕಾಳಮ್ಮ, ಮಹೇಶ್, ವನಜಾ, ರಮೇಶ್, ಜಯಣ್ಣ, ಧನಲಕ್ಷ್ಮಿ, ಮುರುಳಿ, ಎಂ.ಮಹದೇವು ಇದ್ದರು.

27ಕೆಆರ್ ಎಂಎನ್ 5.ಜೆಪಿಜಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.