ಸಾರಾಂಶ
ಪಾಕಿಸ್ತಾನದ ವಿರುದ್ಧ ಸಮರ ಸಾರಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ನೆಪದಲ್ಲಿ ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಮಂಡ್ಯ ಜಿಲ್ಲೆಯಲ್ಲಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ವಾಸಿಗಳನ್ನು ಪತ್ತೆ ಹಚ್ಚಿ ಕೂಡಲೇ ಗಡಿಪಾರು ಮಾಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಪಾಕಿಸ್ತಾನದ ಉಗ್ರರ ನೆಲೆಯನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಸೇನಾ ಕಾರ್ಯಾಚರಣೆಯ ಪರಾಕ್ರಮದ ವಿಜಯೋತ್ಸವವನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಆಚರಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಪಾಕಿಸ್ತಾನದಲ್ಲಿ ಉಗ್ರರನ್ನ ದಮನ ಮಾಡಿದ ರೆಫೆಲ್ ಯುದ್ಧ ನೌಕೆ ಮಾದರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಸಿಂದೂರ ಇಟ್ಟು ಸಿಹಿ ಹಂಚಿ ಸಂಭ್ರಮಿಸಿದರು.
ಜಮ್ಮು, ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಅಮಾಯಕರ ಪ್ರಾಣ ತೆಗೆದಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.ಪಾಕಿಸ್ತಾನದ ವಿರುದ್ಧ ಸಮರ ಸಾರಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ನೆಪದಲ್ಲಿ ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಮಂಡ್ಯ ಜಿಲ್ಲೆಯಲ್ಲಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ವಾಸಿಗಳನ್ನು ಪತ್ತೆ ಹಚ್ಚಿ ಕೂಡಲೇ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ದೇಶ ತಲೆ ತಗ್ಗಿಸುವ ರೀತಿ ಪಹಲ್ಗಾಂ ಹತ್ಯಾಕಾಂಡ ನಡೆದ ಹಿನ್ನೆಲೆ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಮಾಡಿದೆ. ದೇಶದ ಬಿಜೆಪಿ ಸರ್ಕಾರ ಇರುವ ಎಲ್ಲ ರಾಜ್ಯಗಳಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹಿಂದಿರುಗಿಸಲು ಕ್ರಮವಹಿಸಿದ್ದು, ರಾಜ್ಯದಲ್ಲಿ ಮಾತ್ರ ಈ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಓಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ಅವರ ಮೇಲಿನ ಪ್ರಕರಣಗಳ ಖುಲಾಸೆ ಮಾಡಿ, ಬಿಡುಗಡೆ ಮಾಡಿದ್ದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದ್ದು, ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎಲ್ಲಿದ್ದಾರೆ, ಯಾವ ಸಂಘಟನೆಯಲ್ಲಿದ್ದಾರೆ, ಯಾವ ಕೃತ್ಯವೆಸಗುತ್ತಿದ್ದಾರೆ ಇದರ ಬಗ್ಗೆ ಕ್ರಮವಹಿಸಲು ರಾಜ್ಯ ಸರ್ಕಾರ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ. ಎನ್.ಎಸ್.ಇಂದ್ರೇಶ್, ವಿವೇಕ್, ಅಶೋಕ್ ಕುಮಾರ್, ಶಿವಲಿಂಗಯ್ಯ, ಪಿ.ಹಳ್ಳಿ ರಮೇಶ್, ನಿತ್ಯಾನಂದ, ಶಿವಕುಮಾರ್ ಆರಾಧ್ಯ, ಹೇಮಾವತಿ, ಶಿವಲಿಂಗಮ್ಮ, ಬಿ.ಕೃಷ್ಣ, ಮಹಂತಪ್ಪ ಇತರರು ಭಾಗವಹಿಸಿದ್ದರು.