ನೇಹಾ ಕೊಲೆ ಕೇಸ್‌ ಸಿಬಿಐಗೆ ವಹಿಸಿ: ನಡ್ಡಾ

| Published : Apr 22 2024, 02:02 AM IST

ಸಾರಾಂಶ

ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಮೂರು ದಿನಗಳ ಹಿಂದೆ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿನ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಮೂರು ದಿನಗಳ ಹಿಂದೆ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ, ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಕುಟುಂಬಸ್ಥರೊಂದಿಗೆ ಮಾತನಾಡಿ ಘಟನೆ ಕುರಿತು ಮಾಹಿತಿ ಪಡೆದ ನಡ್ಡಾ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನೇಹಾ ಕೊಲೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ರಾಜ್ಯ ಪೊಲೀಸ್‌ ಇಲಾಖೆ ಅಸಮರ್ಥವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.

ಇದು ಅತ್ಯಂತ ಭೀಕರ ಘಟನೆಯಾಗಿದ್ದು, ಇಡೀ ದೇಶವೇ ಬೆಚ್ಚಿಬಿದ್ದಿದೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿ, ಅವರೊಂದಿಗೆ ನಾವಿದ್ದೇವೆ ಎಂದು ಹೇಳಲು ನಾನು ಆಗಮಿಸಿದ್ದೇನೆ. ಘಟನೆ ಕುರಿತು ಮೃತಳ ತಾಯಿ ಹೇಳಿರುವುದನ್ನು ಕೇಳಿ ನನಗೆ ತೀವ್ರ ನೋವು ಆಗಿದೆ. ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ನಾವೆಲ್ಲ ಬದ್ಧರಾಗಿದ್ದೇವೆ ಎಂದರು.

ಜನತೆ ಕ್ಷಮಿಸುವುದಿಲ್ಲ:

ಕೊಲೆ ಕುರಿತು ಮುಖ್ಯಮಂತ್ರಿ, ಗೃಹಸಚಿವರು ನೀಡಿರುವ ಕೇಳಿಕೆ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವ ಮೊದಲು ಅರಿತು ಮಾತನಾಡಬೇಕು. ಕೇವಲ ತುಷ್ಟೀಕರಣಕ್ಕಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ತನಿಖೆಯ ಸಂಪೂರ್ಣ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ಈ ತುಷ್ಟೀಕರಣವನ್ನು ಜನರು ಕ್ಷಮಿಸುವುದಿಲ್ಲ ಎಂದರು.

ನೀವೇ ನ್ಯಾಯ ಕೊಡಿಸಿ-ನಿರಂಜನ್:

ನಡ್ಡಾ ಭೇಟಿ ವೇಳೆ ನೇಹಾಳ ತಂದೆ ನಿರಂಜನ್‌, ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಈಗಾಗಲೇ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಈ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಹೇಗಾದರೂ ಮಾಡಿ ನಮಗೆ ನ್ಯಾಯ ಕೊಡಿಸಿ, ಇದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ನಡ್ಡಾ, ನಿಮ್ಮ ನೋವು ನನಗೆ ಅರ್ಥವಾಗಿದೆ. ಸರ್ಕಾರ ನೇಹಾಳ ಹೆಸರಿನಲ್ಲಿ ವಿಶೇಷ ಕಾನೂನು ರಚಿಸಬೇಕು. ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರನ್ನು ಶೂಟೌಟ್‌ ಮಾಡುವ ಕಾನೂನು ಜಾರಿಗೆ ತರಲು ಒತ್ತಾಯಿಸುವುದಾಗಿ ಭರವಸೆ ನೀಡಿದರು. ನಂತರ ನೇಹಾಳ ತಾಯಿ ಗೀತಾ ಅವರೊಂದಿಗೆ ಚರ್ಚೆ ನಡೆಸಿ ಪುತ್ರಿಯ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ನಡ್ಡಾ ನೀಡಿದರು.