ಸ್ಮಾರ್ಟ್‌ ಮೀಟರ್‌ ಬಗ್ಗೆ ಗೌರ್ನರ್‌ಗೆ ಬಿಜೆಪಿ ದೂರು

| Published : May 22 2025, 12:49 AM IST

ಸಾರಾಂಶ

ರಾಜ್ಯದಲ್ಲಿನ ಸ್ಮಾರ್ಟ್ ಮೀಟರ್ ಅವ್ಯವಹಾರ ಸಂಬಂಧ ಪ್ರತಿಪಕ್ಷ ಬಿಜೆಪಿಯು ರಾಜ್ಯಪಾಲರಿಗೆ ದೂರು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿನ ಸ್ಮಾರ್ಟ್ ಮೀಟರ್ ಅವ್ಯವಹಾರ ಸಂಬಂಧ ಪ್ರತಿಪಕ್ಷ ಬಿಜೆಪಿಯು ರಾಜ್ಯಪಾಲರಿಗೆ ದೂರು ನೀಡಿದೆ.

ಬುಧವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ಸ್ಮಾರ್ಟ್‌ ಮೀಟರ್‌ ಹಗರಣದ ಕುರಿತು ದೂರು ಸಲ್ಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸ್ಮಾರ್ಟ್ ಮೀಟರ್ ಕುರಿತು ರಾಜ್ಯಪಾಲರ ಜೊತೆ ಚರ್ಚೆ ನಡೆಸಲಾಗಿದೆ. ಹಗರಣದಲ್ಲಿ ಗ್ರಾಹಕರಿಗೆ ಅನ್ಯಾಯ ಆಗುತ್ತಿದೆ. ಸಾವಿರಾರು ಕೋಟಿ ರು. ಲೂಟಿ ನಡೆಯುತ್ತಿದೆ. ಹಗರಣದಲ್ಲಿ ರಾಜ್ಯ ಸರ್ಕಾರ, ಇಂಧನ ಇಲಾಖೆ ಮತ್ತು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದಾಗಿ ರಾಜ್ಯಪಾಲರ ಗಮನ ಸೆಳೆಯಲಾಗಿದೆ. ಅಲ್ಲದೆ, ಈ ಕುರಿತು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ನೀಡಿದರೂ, ಎಫ್‍ಐಆರ್ ದಾಖಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರ ದುರ್ಬಳಕೆ ಮಾಡಿರುವ ಇಂಧನ ಸಚಿವರು, ಇತರ ಅಧಿಕಾರಿಗಳು, ಗುತ್ತಿಗೆ ಕೊಟ್ಟು ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಸ್ಮಾರ್ಟ್ ಮೀಟರ್ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಮತ್ತು ಕೇಂದ್ರ ವಿದ್ಯುತ್ ಆಯೋಗದ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುತ್ತಿರುವುದು ಪ್ರಥಮ ಉಲ್ಲಂಘನೆ. ಇಲ್ಲಿ ದುಬಾರಿ ದರ ಇದ್ದು, ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಲಾಗಿದೆ. ಕಾನೂನು ಉಲ್ಲಂಘನೆ, ಅಧಿಕಾರ ದುರ್ಬಳಕೆ ಮಾಡಿರುವ ಕುರಿತು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದರು.