ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ಭ್ರಷ್ಟಾಚಾರ: ತನಿಖೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ

| Published : Mar 17 2024, 02:03 AM IST

ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ಭ್ರಷ್ಟಾಚಾರ: ತನಿಖೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದೇಣಿಗೆ ನೀಡದವರಿಗೆ ಇಡಿ, ಐಟಿ ದಾಳಿ ನಡೆಸಿ, ಹೆದರಿಸಿ, ಬೆದರಿಸುವ ಕೆಲಸ ಮಾಡಲಾಗಿದೆ. ಪಾಕ್‌ ಮೂಲದ ಕಂಪನಿಯಿಂದಲೂ ಬಿಜೆಪಿ ಬಾಂಡ್‌ ಪಡೆದ ಬಗ್ಗೆ ಮಾಹಿತಿ ಇದೆ. ಇವೆಲ್ಲವನ್ನೂ ಹಾಲಿ ನ್ಯಾಯಾಧೀಶರ ಸಮಿತಿ ತನಿಖೆ ನಡೆಸಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಚುನಾವಣಾ ಬಾಂಡ್‌ ಮೂಲಕ ಪಕ್ಷಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದ ಕಂಪನಿಗಳಿಗೆ ಬಿಜೆಪಿ ದೇಶದಲ್ಲಿ ಗುತ್ತಿಗೆ ನೀಡಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶ ಮೇರೆಗೆ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ಪ್ರಕಟಿಸಿದೆ. ಆದರೆ ಅದರ ವಿವರ ನೀಡಿಲ್ಲ. ಲಭ್ಯ ಮಾಹಿತಿ ಪ್ರಕಾರ ಶೇ.50ರಷ್ಟು ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿದ್ದು, ಕಾಂಗ್ರೆಸ್‌ಗೆ ಕೇವಲ ಶೇ.11ರಷ್ಟು ಮಾತ್ರ ದೇಣಿಗೆ ಸಿಕ್ಕಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಪಕ್ಷಕ್ಕೆ ದೇಣಿಗೆ ತರಿಸಿಕೊಂಡಿರುವುದಕ್ಕೆ ನಿದರ್ಶನವಾಗಿದೆ ಎಂದರು. ದೇಣಿಗೆ ನೀಡದವರಿಗೆ ಇಡಿ, ಐಟಿ ದಾಳಿ ನಡೆಸಿ, ಹೆದರಿಸಿ, ಬೆದರಿಸುವ ಕೆಲಸ ಮಾಡಲಾಗಿದೆ. ಪಾಕ್‌ ಮೂಲದ ಕಂಪನಿಯಿಂದಲೂ ಬಿಜೆಪಿ ಬಾಂಡ್‌ ಪಡೆದ ಬಗ್ಗೆ ಮಾಹಿತಿ ಇದೆ. ಇವೆಲ್ಲವನ್ನೂ ಹಾಲಿ ನ್ಯಾಯಾಧೀಶರ ಸಮಿತಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಜನತೆ ಬದಲಾವಣೆ ಬಯಸಿದೆ: ಸಮೀಕ್ಷೆಗಳು ಏನೇ ಹೇಳಿದರೂ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನತೆಗೆ ಅದರಲ್ಲೂ ಬಡವರಿಗೆ ತುಂಬ ಪ್ರಯೋಜನವಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಲಿದೆ. ಲೋಕಸಭಾ ಚುನಾವಣೆ ಬಳಿಕವೂ ಗ್ಯಾರಂಟಿ ಯೋಜನೆ ಮಂದುವರಿಯಲಿದೆ ಎಂದರು. ಈ ಹಿಂದೆ ಯುಪಿಎ ನೇತೃತ್ವದ ಸರ್ಕಾರ ಕೈಗೊಂಡ ಜನೋಪಯೋಗಿ ಯೋಜನೆ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನತೆಗೆ ಪ್ರಚುರಪಡಿಸಲಾಗುವುದು. ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೃಹತ್‌ ಸಮಾವೇಶ ಆಯೋಜಿಸಲಿದೆ. ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ನೀಡದೇ ಇರುವುದು ಅವರು ಅಭಿವೃದ್ಧಿ ಮಾಡಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಕೆಲವರಿಗೆ ದೇಶದ ಅಭಿವೃದ್ಧಿ, ಭವಿಷ್ಯದ ಚಿಂತನೆ ಇಲ್ಲ, ದ.ಕ.ಜಿಲ್ಲೆಯಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಲಿದೆ ಎಂದು ರಮಾನಾಥ ರೈ ಸ್ಪಷ್ಟಪಡಿಸಿದರು. ಮುಖಂಡರಾದ ಶಶಿಧರ ಹೆಗ್ಡೆ, ವಿಕಾಸ್‌ ಶೆಟ್ಟಿ, ಸುರೇಂದ್ರ ಕಂಬಳಿ, ಹರಿನಾಥ್‌, ಅಪ್ಪಿ, ಭಾರತೀಶ್‌ ಅಮೀನ್‌, ರಫೀಕ್‌, ಶಬೀರ್‌, ಶಾಹುಲ್‌ ಹಮೀದ್‌ ಮತ್ತಿತರರಿದ್ದರು.