ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ, ಅವರು ಬೇಸರಗೊಂಡಿರುವ ಈಶ್ವರಪ್ಪ ಅವರ ಮನವೊಲಿಸುತ್ತಾರೆ, ಈಶ್ವರಪ್ಪ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಬಿಜೆಪಿಯ ಹಿರಿಯ ನಾಯಕರು, ಸಾಕಷ್ಟು ಜವಾಬ್ದಾರಿ ನಿಭಾಯಿಸಿ ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈಶ್ವರಪ್ಪ ಬೇಸರಗೊಂಡಿರಬಹುದು. ಬೇಸರ ಶಮನಗೊಂಡು 28 ಅಭ್ಯರ್ಥಿ ಗೆಲ್ಲಿಸುವಲ್ಲಿ ಈಶ್ವರಪ್ಪ ಕೆಲಸ ಮಾಡುತ್ತಾರೆ ಎಂದರು.ರಾಜ್ಯದ 28 ಸ್ಥಾನಕ್ಕೆ ಅರ್ಹತೆ ಇದ್ದ ಯೋಗ್ಯತೆ ಇದ್ದ ನೂರಾರು ಜನ ಇದ್ದಾರೆ. ಆದರೆ ಪಕ್ಷದಲ್ಲಿ ಎಲ್ಲರೂ ಸ್ಪರ್ಧೆ ಮಾಡಲು ಅವಕಾಶ ಇಲ್ಲ. ಪಕ್ಷದ ಹಿರಿಯರು ಚರ್ಚೆ ಮಾಡಿ ಈಶ್ವರಪ್ಪ ಅವರ ಪುತ್ರನಿಗೆ ಸೂಕ್ತ ಅವಕಾಶ ಕಲ್ಪಿಸುತ್ತಾರೆ, ವಿಧಾನ ಪರಿಷತ್, ರಾಜ್ಯಸಭೆ ಹೀಗೆ ಬೇರೆ ಬೇರೆ ಅವಕಾಶಗಳು ಸಿಗಬಹುದು. ಪಕ್ಷದಲ್ಲಿ ಈಶ್ವರಪ್ಪರಿಗೆ ಸೂಕ್ತ ಸ್ಥಾನಮಾನ ಕೊಡುವ ಕೆಲಸವನ್ನು ಪಕ್ಷ ಮಾಡುತ್ತದೆ ಎಂದರು.ಈಶ್ವರಪ್ಪ ಸಂಘದ ಕಾರ್ಯಕರ್ತರಾಗಿ, ಪಕ್ಷ ಸಂಕಷ್ಟದಲ್ಲಿದ್ದಾಗ ಕೆಲಸ ಮಾಡಿದವರು. ಸಂಘಟನೆ ಮಾಡಿ ಬಿಜೆಪಿ ಪಕ್ಷ ಕಟ್ಟಿದವರು ಈಶ್ವರಪ್ಪ. ಈಗಲೂ ಪಕ್ಷದ ಪರವಾಗಿ ನಿಂತು ಎಲ್ಲ ಕೆಲಸ ನಿಭಾಯಿಸುತ್ತಾರೆ ಎಂಬ ಭರವಸೆಯನ್ನು ಯಶ್ಪಾಲ್ ವ್ಯಕ್ತಪಡಿಸಿದರು.