ರೇಣುಕಾಸ್ವಾಮಿ ಮನೆಗೆ ವಿಜಯೇಂದ್ರ ಭೇಟಿ, ಸಾಂತ್ವನ

| Published : Jun 19 2024, 01:04 AM IST

ಸಾರಾಂಶ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ನೊಂದ ಕುಟುಂಬಕ್ಕೆ ನ್ಯಾಯ ಸಲ್ಲಿಸುವುದು ನಮ್ಮ ಉದ್ದೇಶವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

- ಬಿಜೆಪಿಯಿಂದ 2 ಲಕ್ಷ ರು. ಧನಸಹಾಯ ನೀಡಿದ ಬಿವೈವಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ನೊಂದ ಕುಟುಂಬಕ್ಕೆ ನ್ಯಾಯ ಸಲ್ಲಿಸುವುದು ನಮ್ಮ ಉದ್ದೇಶವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಂಗಳವಾರ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪಕ್ಷದ ಪರವಾಗಿ ಕುಟುಂಬಸ್ಥರಿಗೆ 2 ಲಕ್ಷ ರು. ಧನ ಸಹಾಯ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾಸ್ವಾಮಿ ಹತ್ಯೆ ಅಮಾನವೀಯ ಕೃತ್ಯ, ನಾಗರಿಕ ಸಮಾಜದ ಯಾರೂ ಬೆಂಬಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಘಟನೆಯನ್ನು ಅತ್ಯುಗ್ರವಾಗಿ ಖಂಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಟುಂಬಕ್ಕೆ ಆಸರೆ ಆಗಬೇಕು ಎಂದು ಆಗ್ರಹಿಸಿದರು.ಈ ಹತ್ಯೆ ದೇಶದ ಎಲ್ಲೆಡೆ ಚರ್ಚೆ ಆಗುತ್ತಿದೆ. ರೇಣುಕಾಸ್ವಾಮಿಯವರ ತಂದೆ, ತಾಯಿ, ಅವರ ಪತ್ನಿಯನ್ನು ನೋಡಿದರೆ ದುಃಖ ಆಗುತ್ತದೆ. ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ಪತ್ನಿಗೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಕೊಡಬೇಕು. ಪ್ರಕರಣದಲ್ಲಿ ಯಾರಿದ್ದಾರೆ ಎಲ್ಲವೂ ಬಯಲಿಗೆ ಬಂದಿದೆ. ತನಿಖೆ ಸರಿಯಾದ ರೀತಿಯಲ್ಲಿ ಸಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಕೊಲೆ ನಡೆದು ಹಲವು ದಿನಗಳೆ ಕಳೆದರೂ ಸರ್ಕಾರದ ಪರವಾಗಿ ಸಚಿವರು ಬಾರದೆ ಇರುವುದು ಖಂಡನೀಯ. ಇಂತಹ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಾದರೂ ಸರ್ಕಾರ ಧೈರ್ಯ ತುಂಬುವ ಕೆಲಸ ಮಾಡಬೇಕು. ಸರ್ಕಾರ ಯಾರ ಮುಲಾಜಿಗೂ ಒಳಗಾಗದೆ, ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಸದ ಗೋವಿಂದ ಎಂ.ಕಾರಜೋಳ, ಶಾಸಕ ಎಂ.ಚಂದ್ರಪ್ಪ ಮತ್ತಿತರ ಮುಖಂಡರು ಅವರ ಜೊತೆಗಿದ್ದರು.