ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಕ್ಫ್ ಬೋರ್ಡ್ ರದ್ದು ಮಾಡಬೇಕು. ಸಾರ್ವಜನಿಕ ಆಸ್ತಿ ಕಬಳಿಸಲು ಹುನ್ನಾರ ನಡೆಸುತ್ತಿರುವ ವಕ್ಫ್‌ಗೆ ಕುಮ್ಮಕ್ಕು ನೀಡುತ್ತಿರುವ ಜಮೀರ್ ಅಹ್ಮದ್‌ರನ್ನು ಸಚಿವ ಸ್ಥಾನದಿಂದ ಉಚ್ಛಾಟಿಸುವುದು ಸೇರಿದಂತೆ ನಾನಾ ಬೇಡಿಕೆ ಇಟ್ಟುಕೊಂಡು ಭಾರತೀಯ ಜನತಾ ಪಕ್ಷದಿಂದ ಜಿಲ್ಲಾದ್ಯಂತ ಪ್ರತಿಭಟಿಸಲಾಯಿತು.ನವನಗರದ ಜಿಲ್ಲಾಡಳಿತ ಭವನದ ಎದುರು ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಕಾರ್ಯಕರ್ತರು, ನಾಯಕರು, ಬಿಜೆಪಿ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಜಮೀರ್ ಅಹ್ಮದ್ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿರುವ ಅಕ್ರಮ ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿದೆ. ಜಂಟಿ ಸದನದಲ್ಲಿ ಪರಿಶೀಲನೆಯಲ್ಲಿದ್ದು ಈ ತಿದ್ದುಪಡಿ ಕಾಯ್ದೆ ಬಹುತೇಕ ಜಾರಿಯಾಗಲಿದೆ ಎಂದರು.ವಕ್ಫ್ ಬೋರ್ಡ್‌ನಿಂದ ಆಗುತ್ತಿರುವ ಗೊಂದಲ ರಾಜ್ಯದಲ್ಲಿನ ಸಾಮರಸ್ಯ ಹದಗೆಡುವುದಕ್ಕೆ ಕಾರಣವಾಗಿದೆ. ಸರ್ಕಾರದ ವಿವೇಚನೆಯಿಲ್ಲದೇ ಕೈಗೊಳ್ಳುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ತಮ್ಮ ನಿಲುವು ತೆಗೆದುಕೊಳ್ಳಬೇಕಾಗಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ಅವರ ಪರವಾಗಿ ನಿಂತಿದೆ ಎಂದು ದೂರಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ದೇಶದಲ್ಲಿ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆಗೆ ಇರುವಷ್ಟು ಆಸ್ತಿ ವಕ್ಫ್ ಬೋರ್ಡ್‌ನಲ್ಲಿದೆ. ಈ ಆಸ್ತಿ ಎಲ್ಲಿಂದ ಬಂತು. ಸುಮಾರು 9 ಲಕ್ಷ ಎಕರೆ ಜಮೀನು ಎಲ್ಲಿಂದ ಬಂದಿದೆ. ಸರ್ಕಾರ ಕೂಡಲೇ ವಕ್ಫ್ ಬೋರ್ಡ್ ರದ್ದು ಮಾಡಲಿ ಎಂದು ಆಗ್ರಹಿಸಿದರು.ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗುವಂತಹ ಯಾವುದೇ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೈಗೊಳ್ಳುವ ಮತ್ತು ಮತ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ ಹಾಗೂ ಹಿಂದೂ ವಿರೋಧಿ ನಿರ್ಣಯ ಕೈಗೊಳ್ಳುವ ತನ್ನ ಹಳೆ ಚಾಳಿ ಕೈಡಬೇಕು. ವಕ್ಫ್ ಬೋರ್ಡ್ ಸಾರ್ವಜನಿಕ ಆಸ್ತಿ ಕಬಳಿಸುವ ಹುನ್ನಾರಕ್ಕೆ ಸಚಿವ ಜಮೀರ್ ಅಹ್ಮದ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು. ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆ ತಂತ್ರಗಾರಿಕೆಯಾಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ರಾಜ್ಯದಲ್ಲಿ 1 ಲಕ್ಷ ಎಕರೆ ಜಮೀನು ವಕ್ಫ್‌ಗೆ ಸಂಬಂಧಿಸಿದ್ದು ಎಂದು ಸರ್ಕಾರ ಘೋಷಣೆ ಮಾಡಿದೆ. ಗೆಜೆಟ್ ನೋಟಿಫಿಕೇಶನ್ ಕೂಡ ಹೊರಡಿಸಲಾಗಿದೆ. ಈ ಆಸ್ತಿ ಎಲ್ಲಿಂದ ಬಂತು. ಅಲ್ಲಾ, ಮುಲ್ಲಾ, ಮೌಲ್ವಿಗಳು ಕೊಟ್ಟಿದ್ದಾರಾ ಅಥವಾ ಯಾರು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಡಿಸಿ, ತಹಸೀಲ್ದಾರ್, ಎಸಿ ಮೂಲಕ ವಕ್ಫ್‌ಗೆ ಸಂಬಂಧಿಸಿದ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ ಎಂದು ಹೇಳುವ ಮೂಲಕ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸುವ ಮೂಲಕ ಪಾಪದ ಕೃತ್ಯ ಮಾಡಿದ್ದಾರೆ. ಇವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಕೂಡಲೇ ಇದಕ್ಕೆ ಕಾಯ್ದೆ ತರಲಿದೆ ಎಂದು ಹೇಳಿದರು.ಬೇಡಿಕೆಗಳ ಆಗ್ರಹ:
ಮುಖ್ಯಮಂತ್ರಿಯವರು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಸ್ಪಷ್ಟನೆ ನೀಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಶನ್ ಹಿಂದಕ್ಕೆ ಪಡೆಯಬೇಕು. ಕೇಂದ್ರ ಸರ್ಕಾರವು ತರುತ್ತಿರುವ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಪ್ರತಿಭಟನೆಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ.ಬಸವರಾಜ ಯಂಕಂಚಿ, ರಾಜು ನಾಯ್ಕರ, ಲಕ್ಷ್ಮೀ ನಾರಾಯಣ ಕಾಸಟ್, ಜಿ.ಎನ್.ಪಾಟೀಲ, ಗುಂಡೂರಾವ್ ಸಿಂಧೆ, ಯಲ್ಲಪ್ಪ ಬೆಂಡಿಗೇರಿ, ಸತ್ಯನಾರಾಯಣ ಹೇಮಾದ್ರಿ, ಸವಿತಾ ಲೆಂಕೆಣ್ಣವರ, ಶೋಭಾ ರಾವ್, ಶಶಿಕಲಾ ಮಜ್ಜಗಿ, ವೀರಣ್ಣ ಹಳೇಗೌಡರ, ಪ್ರಭು ಹಡಗಲಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಶಂಭುಗೌಡ ಪಾಟೀಲ, ಡಾ.ಶೇಖರ ಮಾನೆ, ಚಂದ್ರಕಾಂತ ಕೇಸನೂರ, ಸುರೇಶ ಮಜ್ಜಗಿ, ಶ್ರೀನಾಥ ಸಜ್ಜನ್, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ ಪ್ರತಿಭಟನೆಯಲ್ಲಿದ್ದರು.