ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ

| Published : Jul 12 2024, 01:47 AM IST / Updated: Jul 12 2024, 10:23 AM IST

ಸಾರಾಂಶ

ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದ್ದು, ಇದನ್ನು ಅರಿತ ಕೇಂದ್ರದ ಎಸ್ಸಿ ಆಯೋಗ ಕಾರಣ ಕೇಳಿ ನೋಟಿಸ್ ನೀಡಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ.

 ಮಂಡ್ಯ :  ಮೈಸೂರು ಮುಡಾ ಹಗರಣ, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಒತ್ತಾಯಿಸಿದರು.

ವಾಲ್ಮೀಕಿ ನಿಗಮದ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಹೈದ್ರಾಬಾದ್‌ನ ಬ್ಯಾಂಕ್ ಖಾತೆಗೆ ಹೋಗಿದ್ದು, ತೆಲಂಗಾಣ ಚುನಾವಣಾ ವೆಚ್ಚಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಹಗರಣಕ್ಕೆ ಕಾರಣರಾದ ಮಾಜಿ ಸಚಿವ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ದದ್ದಲ್ ಅವರನ್ನು ಬಂಧಿಸಬೇಕು. ಇದರಲ್ಲಿ ಎಸ್‌ಐಟಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ದೂರಿದರು.

ಯೂನಿಯನ್ ಬ್ಯಾಂಕ್‌ನ ನಕಲಿ ಖಾತೆಗೆ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಸಿಬಿಐಗೆ ದೂರು ನೀಡಿದ್ದಾರೆ. ಅದರಂತೆ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಅರ್ಥಿಕ ಅಪರಾಧವಾಗಿರುವ ಕಾರಣ ಇಡಿ ಸಹ ತನಿಖೆ ನಡೆಸುತ್ತಿದೆ ಎಂದು ವಿವರಿಸಿದರು.

ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಕೇಂದ್ರದ ಅನುದಾನ ದುರುಪಯೋಗವಾಗಿರುವ ಕಾರಣ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವರದಿ ನೀಡುವಂತೆ ಸೂಚಿಸಿ ಪತ್ರ ಬರೆದಿದೆ ಎಂದರು.

ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದ್ದು, ಇದನ್ನು ಅರಿತ ಕೇಂದ್ರದ ಎಸ್ಸಿ ಆಯೋಗ ಕಾರಣ ಕೇಳಿ ನೋಟಿಸ್ ನೀಡಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈಸೂರು ಮುಡಾದಲ್ಲಿ ನಡೆಸಿರುವ ಹಗರಣವನ್ನು ಖಂಡಿಸಿ ಶುಕ್ರವಾರ (ಜು.೧೨) ಬಿಜೆಪಿಯಿಂದ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಮಂಡ್ಯದಿಂದಲೂ ಸಹಸ್ರಾರು ಮಂದಿ ಭಾಗವಹಿಸಲಿದ್ದಾರೆ ಎಂದರು.

ಬೆಂಗಳೂರಿನಿಂದ ನೂರಾರು ಕಾರುಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತತ್ವದಲ್ಲಿ ಮೈಸೂರಿಗೆ ತೆರಳಲಿದ್ದು, ಮಧ್ಯದಲ್ಲಿರುವ ರಾಮನಗರ, ಮಂಡ್ಯದಿಂದಲೂ ನೂರಾರು ಕಾರುಗಳಲ್ಲಿ ಕಾರ್ಯಕರ್ತರು ಅವರನ್ನು ಹಿಂಭಾಲಿಸಲಿದ್ದಾರೆ ಎಂದರು.

ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಮಾಡಿ ವರದಿ ನೀಡಲು ಸರ್ಕಾರವೇ ಸೂಚಿಸಬೇಕು. ಜಿಲ್ಲಾಧಿಕಾರಿಗಳಿಂದ ಮುಡಾ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್, ವಕ್ತಾರ ಸಿ.ಟಿ. ಮಂಜುನಾಥ್, ನಗರಾಧ್ಯಕ್ಷ ವಸಂತಕುಮಾರ್, ಮುಖಂಡರಾದ ಅಂಕಪ್ಪ, ವೈರಮುಡಿ, ಮಾಧ್ಯಮ ಸಂಚಾಲಕ ನಾಗಾನಂದ್ ಗೋಷ್ಠಿಯಲ್ಲಿದ್ದರು.