ಸಾರಾಂಶ
- ಪ್ರತ್ಯೇಕ ರಾಷ್ಟ್ರದ ಪ್ರಸ್ತಾಪಕ್ಕೆ ಕಾರ್ಯಕರ್ತರ ಆಕ್ರೋಶ । ಡಿ.ಕೆ. ಸುರೇಶ್ ಪೋಸ್ಟರ್ ಸುಟ್ಟು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರತ್ಯೇಕ ರಾಷ್ಟ್ರದ ಪ್ರಸ್ತಾಪ ಮಾಡಿರುವ ಸಂಸದ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಪಕ್ಷದ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಹೊರಟ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇಲ್ಲಿನ ಆಜಾದ್ ಪಾರ್ಕ್ ವೃತ್ತದಲ್ಲಿ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ ನಡೆಸಿ ಇದೇ ವೇಳೆಯಲ್ಲಿ ಅವರ ಭಾವಚಿತ್ರ ಇರುವ ಪೋಸ್ಟರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಕಾಂಗ್ರೆಸ್ ಇವತ್ತು ದೇಶವನ್ನು ವಿಭಜನೆ ಮಾಡಲು ಹೊರಟಿದ್ದಲ್ಲ, ನಮಗೆ ಸ್ವಾತಂತ್ರ್ಯ ಸಿಕ್ಕ ತಕ್ಷಣದಿಂದಲೂ ನಮ್ಮ ದೇಶವನ್ನು ವಿಭಜನೆಯ ಹಾದಿಯತ್ತ ತೆಗೆದುಕೊಂಡು ಹೋಗುತ್ತಿದೆ. ಅವರ ನಾಯಕರು. ಈ ಹಿಂದೆಯೂ ಅಖಂಡ ಭಾರತ ಪ್ರತಿಷ್ಟಾಪನೆ ಮಾಡಬೇಕು ಎಂದು ಯೋಚಿಸಿದ ವರಲ್ಲ, ಅವರು ದೇಶವನ್ನು ವಿಭಜನೆ ಮಾಡಿ. ಅವರ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಏನು ಬೇಕೋ ಅದನ್ನೇ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.ಡಿ.ಕೆ. ಸುರೇಶ್ ನೀಡಿರುವ ಹೇಳಿಕೆಗೆ ನೈತಿಕ ಹೊಣೆ ಹೊತ್ತು ಅವರ ಸಹೋದರ ಈ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಡಿ.ಕೆ. ಶಿವಕುಮಾರ್ ತಮ್ಮ ಸಹೋದರ ಸುರೇಶ್ ಅವರಿಂದ ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ಹೇಳಿಸಿದ್ದಾರೆ. ಈ ದೇಶವನ್ನು ಒಡೆಯುವ ಕಾಂಗ್ರೆಸ್ ಪಕ್ಷದ ಹುನ್ನಾರ ಮತ್ತೊಮ್ಮೆ ಸಾಬೀತಾಗಿದೆ. ಹಾಗಾಗಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದರು.ಈ ರೀತಿ ನಿಮ್ಮ ಧೋರಣೆ ಹೆಚ್ಚು ದಿನ ನಡೆಯುವುದಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಲಿದೆ ಎಂದು ಹೇಳಿದರು.ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಮಾತನಾಡಿ, ಕಾಂಗ್ರೆಸ್ ಮೊದಲಿನಿಂದಲೂ ವಿಭಜನೆ ನೀತಿ ಅನುಸರಿಸಿಕೊಂಡು ಬಂದಿದೆ. ಜಾತಿವಾರು, ಪ್ರಾಂತ್ಯವಾರು ವಿಭಜನೆ, ಹೀಗೆ ವಿವಿಧ ಸ್ತರಗಳಲ್ಲಿ ವಿಭಜನೆ ಮಾಡ್ತಾ ಇರೋದು ಕಾಂಗ್ರೆಸ್ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮನಸ್ಥಿತಿ ಹೊಂದಿದ್ದಾರೆ. ರಾಷ್ಟ್ರಪತಿ ಮತ್ತು ಪ್ರಧಾನಿ ಬಗ್ಗೆ ಏಕ ವಚನದಲ್ಲಿ ಪದ ಪ್ರಯೋಗ ಮಾಡುತ್ತಾರೆ. ತಾವು ಮಾತನಾಡಿರುವುದು ಗ್ರಾಮೀಣ ಸೊಗಡು ಎನ್ನುತ್ತಾರೆ. ಅವರು ಎಂದಾದರೂ ಸೋನಿಯಾ ಗಾಂಧಿ ಯವರಿಗೆ ಏಕ ವಚನದಲ್ಲಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.ಸಂಸದ ಸುರೇಶ್ ಅವರ ಅಹಂಕಾರ, ನಮ್ಮ ರಾಜ್ಯದ ನೆಲದಲ್ಲಿ ನಡೆಯುವುದಿಲ್ಲ, ಅಗೌರವದ ಸೂಚಿಸುವ ಮಾತು ತಪ್ಪು ಎಂದರು.ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ರಾಯ್ಕರ್, ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣೀಕ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಜಿಲ್ಲಾ ವಕ್ತಾರ ಟಿ. ರಾಜಶೇಖರ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಬಿ. ರಾಜಪ್ಪ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. 5 ಕೆಸಿಕೆಎಂ 2ಪ್ರತ್ಯೇಕ್ಷ ರಾಷ್ಟ್ರ ಕುರಿತು ಪ್ರಸ್ತಾಪ ಮಾಡಿರುವ ಸಂಸದ ಡಿ.ಕೆ. ಸುರೇಶ್ ವಿರುದ್ಧ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.