ಅಕ್ಕಿ ಅಕ್ರಮ ಸದನದಲ್ಲಿ ಚರ್ಚಿಸಲು ಬಿಜೆಪಿ ಆಗ್ರಹ

| Published : Dec 07 2023, 01:15 AM IST

ಅಕ್ಕಿ ಅಕ್ರಮ ಸದನದಲ್ಲಿ ಚರ್ಚಿಸಲು ಬಿಜೆಪಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರದಲ್ಲಿ ದೊಡ್ಡ ಮಟ್ಟದ ಅಕ್ಕಿ ನಾಪತ್ತೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ದೂರಿರುವ ತಾಲೂಕು ಬಿಜೆಪಿ ಮುಖಂಡರುಗಳು, ಇದರ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಸದನದಲ್ಲಿ ಧ್ವನಿ ಎತ್ತಬೇಕೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಶಹಾಪುರ ಬಿಜೆಪಿ ನಾಯಕರುಗಳಿಂದ ಅಶೋಕ್‌, ವಿಜಯೇಂದ್ರ ಭೇಟಿ

ಸಚಿವ ದರ್ಶನಾಪುರ ಹಿಂಬಾಲಕರ ಕೈವಾಡ ಶಂಕೆ: ಬಿಜೆಪಿ ಆರೋಪಕನ್ನಡಪ್ರಭ ವಾರ್ತೆ ಶಹಾಪುರ

ಶಹಾಪುರದಲ್ಲಿ ದೊಡ್ಡ ಮಟ್ಟದ ಅಕ್ಕಿ ನಾಪತ್ತೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ದೂರಿರುವ ತಾಲೂಕು ಬಿಜೆಪಿ ಮುಖಂಡರುಗಳು, ಇದರ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಸದನದಲ್ಲಿ ಧ್ವನಿ ಎತ್ತಬೇಕೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಅಕ್ಕಿ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಕಾಟಾಚಾರಕ್ಕೆ ಎನ್ನುವಂತೆ ತನಿಖೆ ಮಾಡುತ್ತಿದ್ದಾರೆ. ಅಕ್ರಮ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಅವರ ಹಿಂಬಾಲಕರ ಕೈವಾಡವಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರುಗಳು, ಸಿಐಡಿಗೆ ತನಿಖೆ ವಹಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಯುವ ಮುಖಂಡ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರವರ ಸ್ವಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ಕಿ ನಾಪತ್ತೆ ಪ್ರಕರಣ ನಡೆದಿದೆ. ತನಿಖೆ ನಡೆಸಲಾಗುತ್ತಿದೆ ಎಂದವರು ಹಾರಿಕೆ ರೀತಿಯ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ ಎಂದು ಟೀಕಿಸಿದರು.

ಒಂದೆಡೆ ತನಿಖೆಗೆ ಆದೇಶಿಸಿ, ಇನ್ನೊಂದೆಡೆ ಅಕ್ಕಿ ಪ್ರಕರಣದಲ್ಲಿ ಭಾಗಿಯಾದ ಹಿಂಬಾಲಿಕರನ್ನು ರಕ್ಷಿಸುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆಂದು ದೂರಿದ ಬಿಜೆಪಿ ನಾಯಕರು, ಈ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿ ನಿಷ್ಪಕ್ಷಪಾತವಾದ ತನಿಖೆ ನಡೆಸುವಂತೆ ತಾವು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಗುರು ಕಾಮಾ ಮಾತನಾಡಿ, ಈಗಾಗಲೇ ನಮ್ಮ ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರೂ ಈ ಪ್ರಕರಣವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲಾಧಿಕಾರಿಗಳು ಈ ಪ್ರಕರಣದ ವಿಷಯವನ್ನು ತಿಳಿದಾಗಲೂ ಗೋದಾಮಿಗೆ ಭೇಟಿ ನೀಡದೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ ಅವರಿಗೆ ಪ್ರಬಲ ವ್ಯಕ್ತಿಗಳಿಂದ ಒತ್ತಡವಿದೆ ಎನ್ನುವ ಅನುಮಾನಗಳು ಮೂಡಿ ಬರುತ್ತಿವೆ. ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ಕಿನಾಪತ್ಯ ಪ್ರಕರಣವಾಗಿರುವುದು ನಮ್ಮ ಜಿಲ್ಲೆಗೆ ದೊಡ್ಡ ಕಪ್ಪು ಚುಕ್ಕೆಯಾಗಿದೆ ಇದರ ಹಿಂದೆ ದೊಡ್ಡ ಜಾಲವೇ ಇದೆ. ತಾವು ಸದನದಲ್ಲಿ ಈ ವಿಷಯವನ್ನು ಎತ್ತಬೇಕೆಂದು ಅವರು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಶಶಿಲ್ ನಮೋಶಿ, ಬಿಜೆಪಿಯ ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ, ತಾಲೂಕು ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ, ಹಿರಿಯ ಮುಖಂಡ ಡಾ. ಚಂದ್ರಶೇಖರ್ ಸುಬೇದಾರ್,ಬಸವರಾಜ ವಿಭೂತಿಹಳ್ಳಿ, ರಾಜಶೇಖರ ಗೂಗಲ್ ಬಸವರಾಜ ಅರುಣಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.