ಬಹುಮತವಿದ್ದರೂ ಅಧಿಕಾರ ದಕ್ಕಿಸಿಕೊಳ್ಳದ ಬಿಜೆಪಿ

| Published : Aug 29 2024, 12:49 AM IST

ಬಹುಮತವಿದ್ದರೂ ಅಧಿಕಾರ ದಕ್ಕಿಸಿಕೊಳ್ಳದ ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ ಪಪಂ ನೂತನ ಅಧ್ಯಕ್ಷರಾಗಿ ಗೀತಾ ರಂಜನ್ ಅಜಿತ್ ಕುಮಾರ್, ಉಪಾಧ್ಯಕ್ಷರಾಗಿ ಆಯ್ಕೆಯಾದ ಎಚ್.ಪಿ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಶಾಸಕಿ ನಯನಾ ಮೋಟಮ್ಮ ಇದ್ದರು.

ಕನ್ನಡಪ್ರಭ ವಾರ್ತೆ ಮೂಡಿಗೆರೆ

ಲೋಕಸಭಾ ಚುನಾವಣೆಯ ಮೈತ್ರಿ ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್‌ ಮುಂದುವರೆಸಿಕೊಂಡು ಬರುತ್ತಿದೆ. ಆದರೆ ಮೂಡಿಗೆರೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ದೋಸ್ತಿಗಳು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿವೆ.

ಬಿಜೆಪಿ ಹಾಗೂ ಜೆಡಿಎಸ್‌ನ ತಲಾ ಒಬ್ಬರು ಸದಸ್ಯರ ಬೆಂಬಲದಿಂದಾಗಿ ಕಾಂಗ್ರೆಸ್‌ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ದಕ್ಕಿಸಿಕೊಂಡಿದ್ದು, ಬಿಜೆಪಿಗೆ ಬಹುಮತ ಇದ್ದರೂ ಅಧಿಕಾರದಿಂದ ವಂಚಿತಗೊಂಡಿದೆ.

ಮೂಡಿಗೆರೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ರಾಜಶೇಖರ್‌ ಮೂರ್ತಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ರಂಜನ್‌ ಅಜಿತ್ ಕುಮಾರ್‌ ನಾಮಪತ್ರ ಸಲ್ಲಿಸಿದರೆ, ಇತ್ತ ಬಿಜೆಪಿಯಿಂದ ಆಶಾ ಮೋಹನ್‌ ಸ್ಪರ್ಧೆ ಮಾಡಿದ್ದರು.

ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 7 ಮತಗಳನ್ನು ಪಡೆದು ಜಯಗಳಿಸಿದರೆ, ಆಶಾ ಮೋಹನ್‌ ಅವರು 5 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಪಿ.ರಮೇಶ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯ ಕೊನೆಯಲ್ಲಿ ತಹಸೀಲ್ದಾರ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.

ಕಾರ್ಯತಂತ್ರ: ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯರಿದ್ದು, ಈ ಪೈಕಿ 6 ಬಿಜೆಪಿ, 4 ಕಾಂಗ್ರೆಸ್‌ ಹಾಗೂ ಒಬ್ಬರು ಜೆಡಿಎಸ್‌ ಸದಸ್ಯರಿದ್ದಾರೆ.

ಚುನಾವಣೆಯಲ್ಲಿ ಮೈತ್ರಿ ಧರ್ಮ ಪರಿಪಾಲನೆ ಆಗಿದ್ದರೆ, ಬಿಜೆಪಿ ಹಾಗೂ ಜೆಡಿಎಸ್‌ ಒಟ್ಟು ಸದಸ್ಯರ ಸಂಖ್ಯೆ 7, ಸಂಸದ ಖೋಟಾ ಶ್ರೀನಿವಾಸ್‌ ಪೂಜಾರಿ ಸಹ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೆ ಒಟ್ಟು ಸದಸ್ಯರ ಸಂಖ್ಯೆ 8 ಆಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬ ಲೆಕ್ಕಚಾರ ಇತ್ತು. ಆದರೆ, ಈ ಲೆಕ್ಕಚಾರ ಉಲ್ಟಾ ಆಗಿದೆ. ಕಳೆದ ಮೊದಲನೇ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪ್ರತಿ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಸದಸ್ಯರ ಸಂಖ್ಯಾ ಬಲ ನಾಲ್ಕು ಇದ್ದರೂ ಅಧಿಕಾರವನ್ನು ಪಡೆಯುವಲ್ಲಿ ಕೈ ಪಡೆ ಯಶಸ್ವಿಯಾಗಿದೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದರಿಂದ ಕಾಂಗ್ರೆಸ್‌ನ ಸದಸ್ಯರಾದ ಎಚ್‌.ಪಿ. ರಮೇಶ್‌ ಅವರು ಅವಿರೋಧ ಆಯ್ಕೆಯಾದರು.

ಗೇಮ್‌ ಪ್ಲಾನ್‌: ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಯಾಗುತ್ತಿದ್ದಂತೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯರೊಂದಿಗೆ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದರು. ಜೆಡಿಎಸ್‌ ಸದಸ್ಯರಾದ ಗೀತಾ ರಂಜನ್‌ ಅಜಿತ್‌ ಕುಮಾರ್‌ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದರು. ಹಾಗಾಗಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 4 ರಿಂದ 5ಕ್ಕೆ ಏರಿತು. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಪಪಂ ಸದಸ್ಯ ಧರ್ಮಪಾಲ್ ಅವರು ಕೆಲ ಕಾರಣದಿಂದ ಬಿಜೆಪಿಯಿಂದ ಅಂತರ ಕಾದುಕೊಂಡಿದ್ದರು. ಅವರನ್ನು ಕೂಡ ಕಾಂಗ್ರೆಸ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಪಪಂಯ 6 ರಿಂದ 5ಕ್ಕೆ ಕುಸಿಯಿತು.

ಕಾಂಗ್ರೆಸ್‌ ಬೆಂಬಲಿತರ ಸಂಖ್ಯೆ6ಕ್ಕೆ ಏರಿತು. ಆದರೂ ಕೂಡ ಬಿಜೆಪಿ ಎರಡು ದಿನಗಳ ಹಿಂದೆ ತನ್ನ ಎಲ್ಲಾ 6 ಮಂದಿ ಸದಸ್ಯರಿಗೆ ವಿಪ್‌ ಜಾರಿ ಮಾಡಿತ್ತು. ಶಾಸಕಿ ನಯನಾ ಮೋಟಮ್ಮ ಅವರು ಸಹ ಮತದಾನ ಮಾಡಲು ಅವಕಾಶ ಇದ್ದರಿಂದ ಕಾಂಗ್ರೆಸ್‌ ಸದಸ್ಯರ ಸಂಖ್ಯಾ ಬಲ 7 ಆಗಿದ್ದರೆ, ಬಿಜೆಪಿಯ ಸಂಖ್ಯಾ ಬಲ 5 ಆಗಿತ್ತು. ಸಂಸದರು ಕೂಡ ಭಾಗವಹಿಸಿರಲಿಲ್ಲ, ಇದ್ದರಿಂದ ಬಿಜೆಪಿ ಪಟ್ಟಣ ಪಂಚಾಯ್ತಿಯಲ್ಲಿ ಅಧಿಕಾರವನ್ನು ಕಳೆದುಕೊಂಡಿತು.

ಅನಿವಾರ್ಯತೆ: ಅಭಿನಂದನಾ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆ ಬಳಿಕ ಪಪಂ ಅಧಿಕಾರ ಹಿಡಿಯಲೇಬೇಕೆಂದು ಪಪಂ ಹಿರಿಯ ಸದಸ್ಯರೊಂದಿಗೆ ಗುಪ್ತ ಕಾರ್ಯತಂತ್ರ ರೂಪಿಸುವ ಅನಿವಾರ್ಯತೆ ಇತ್ತು. ಹಾಗಾಗಿ ಈ ಬಗ್ಗೆ ಪಕ್ಷದ ಯಾವ ಮುಖಂಡರ ಗಮನಕ್ಕೆ ತರದೇ, ಚರ್ಚೆ ಕೂಡ ನಡೆಸಲಿಲ್ಲ. ತಾನು ಮಾಡಿದ ಕಾರ್ಯದ ಬಗ್ಗೆ ಯಾರೂ ತಪ್ಪು ತಿಳಿಯಬಾರದು. ತನ್ನ ಕ್ಷೇತ್ರಕ್ಕೆ ಪಪಂ ಒಂದು ಪ್ರತಿಬಿಂಬಿಸುವ ಪಂಚಾಯಿತಿ ಆಗಿದೆ. ಹಾಗಾಗಿ ಅಧಿಕಾರ ಹಿಡಿಯಲು ಗುಪ್ತ ಕಾರ್ಯಚರಣೆ ನಡೆಸಬೇಕಾಯಿತು. ಇನ್ನು ಮುಂದೆ ಪಟ್ಟಣದ ಎಲ್ಲಾ ಸಮಸ್ಯೆ ಬಗೆಹರಿಸಲು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಪಪಂ ಸದಸ್ಯರಾದ ಕೆ.ವೆಂಕಟೇಶ್, ಹಂಝಾ, ಕುರ್ಷಿದ್‌ಬಾನು, ಧರ್ಮಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.