ಸಾರಾಂಶ
ರಾಜ್ಯದ ಹಿಂದುಳಿದ ವರ್ಗಗಳ 22 ನಿಗಮಗಳಿಗೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಚಾಮರಾನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯದ ಹಿಂದುಳಿದ ವರ್ಗಗಳ 22 ನಿಗಮಗಳಿಗೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ನಂತರ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ತೆರಳಿ ಅಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಷಣೆ ಮಾಡಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎನ್.ಮಹೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಅಹಿಂದ ವರ್ಗಗಳ ಮತಗಳನ್ನು ಪಡೆದು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಆ ವರ್ಗಗಳಿಗೆ ನ್ಯಾಯ ಕಲ್ಪಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಒಂದು ಸಮುದಾಯವನ್ನು ತೃಷ್ಟಿಕರಿಸುವ ಭರದಲ್ಲಿ ಹಿಂದುಳಿದ ವರ್ಗಗಳಿಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಸೇರಿದ 22 ನಿಗಮಗಳಿಗೆ ಆರ್ಥಿಕವಾಗಿ ಸಬಲೀಕರಣಗೊಳಿಸಲು ಅನುದಾನ ನೀಡುವ ಬದಲು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ₹350 ಕೋಟಿ ಅಲ್ಪಸಂಖ್ಯಾತ ನಿಗಮಕ್ಕೆ ನೀಡಿದ್ದಾರೆ. ಇದರಲ್ಲಿ ಕ್ರೈಸ್ತರು ಮತ್ತು ಜೈನರಿಗೆ ನಯಾಪೈಸೆ ಅನುದಾನ ನೀಡಿಲ್ಲ.22 ನಿಗಮಗಳಲ್ಲಿ ಒಳಪಡುವ ನೂರಾರು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಕೇವಲ ₹150 ಕೋಟಿ ನೀಡುವ ಮೂಲಕ ಅನ್ಯಾಯ ಎಸಗಿದ್ದಾರೆ. ಈ ಅನುದಾನ ನಿಗಮಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಅಧಿಕಾರಿ ವರ್ಗಗಳ ಮೋಜು, ಮಸ್ತಿಗೆ ಮಾತ್ರ ಬಳಕೆ ಆಗುತ್ತಿದೆ. ಹೊರತು ಹಿಂದುಳಿದ ವರ್ಗಗಳ ಬಡವರ ಕಲ್ಯಾಣ ಕಾರ್ಯಕ್ರಮಗಳು ಒಂದು ಕೂಡ ಅನುಷ್ಟಾನವಾಗಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನಿಷ್ಠ 22 ನಿಗಮಗಳಿಗೆ ₹1000 ಕೋಟಿ ನೀಡಿ ಅವರ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಮಾಡುತ್ತದೆ ಎಂದು ಬಯಸಿದ್ದೆವು, ಆದರೆ ಅಹಿಂದ ಮತಗಳನ್ನು ಪಡೆದು ಸಿಎಂ ಆದ ಸಿದ್ದರಾಮಯ್ಯ ಅವರ್ಗಗಳಿಗೆ ಸವಲತ್ತುಗಳನ್ನು ತಲುಪಿಸಲು ವಿಫಲರಾಗಿದ್ದಾರೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನಾದರೂ ಹಿಂದುಳಿದ ವರ್ಗಗಳ ಸಮುದಾಯ ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯರನ್ನು ಪ್ರಶ್ನೆ ಮಾಡಬೇಕು. ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ನಿಗಮಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ಚಾಮಿ, ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಅರಕಲವಾಡಿ ನಾಗೇಂದ್ರ, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಸೋಮಣ್ಣ ಉಪ್ಪಾರ್, ಲೋಕೇಶ್ ಜತ್ತಿ, ಮಾಜಿ ಅಧ್ಯ ನಟರಾಜೇಗೌಡ, ಬಂಗಾರನಾಯಕ, ತಾಪಂ ಮಾಜಿ ಸದಸ್ಯ ಕಬ್ಬಹಳ್ಳಿ ರೇವಣ್ಣ, ಯುವ ಮೋರ್ಚಾದ ಅಧ್ಯಕ್ಷ ಸೂರ್ಯ, ಆನಂದಭಗೀರಥ, ಅಗರರಾಜು, ಸೋಮಣ್ಣ, ದೊಡ್ಡರಾಜು, ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ, ನಗರ ಮಂಡಲ ಅಧ್ಯಕ್ಷ ಪುನೀತ್, ಚುಂಗಡಿಪುರ ಮಹೇಶ್, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಹನೂರು ಶ್ರೀನಿವಾಸಮೂರ್ತಿ, ರಾಚಶೆಟ್ಟಿ ಇತರರು ಭಾಗವಹಿಸಿದ್ದರು.