ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ 5 ನೀತಿಗಳ ವಿರುದ್ಧ ಸೋಮವಾರ ಉಡುಪಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳ ಮುಂದೆ, ಬಿಜೆಪಿ ರಾಜ್ಯಾಧ್ಯಕ್ಷರ ಕರೆಯಂತೆ, ಉಡುಪಿ ಜಿಲ್ಲಾ ಬಿಜೆಪಿಯಿಂದ ಧರಣಿ ಸತ್ಯಾಗ್ರಹ - ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳ ಗ್ರಾಪಂಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದರು.ಉಡುಪಿ ಜಿಲ್ಲೆಯನ್ನು ಕಾಡುತ್ತಿರುವ 9/11 ನಿವೇಶನಗಳ ಸಮಸ್ಯೆಯನ್ನು ಪರಿಹಾರಕ್ಕೆ ಅಗ್ರಹಿಸಿ, ಸರ್ಕಾರ ಆಕ್ರಮ ಸಕ್ರಮವನ್ನು ತಿರಸ್ಕರಿಸುವುದನ್ನು ಖಂಡಿಸಿ, ಆಶ್ರಯ ಮನೆಗಳ ಮಂಜೂರಾತಿಗೆ ಒತ್ತಾಯಿಸಿ, ವೃದ್ಯಾಪ್ಯ ವೇತನ-ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೊಳಿಸಲು ಅಗ್ರಹಿಸಿ, ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಧರಣಿ ಸತ್ಯಾಗ್ರಹ ನಡೆಸಲಾಯಿತು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ತೆಂಕನಿಡಿಯೂರು ಗ್ರಾಪಂನಲ್ಲಿ ಪ್ರತಿಭಟನೆಯನ್ನು ಆರಂಭಿಸಿ 19 ಗ್ರಾಪಂಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. ಅವರೊಂದಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಮುಂತಾದವರು ಭಾಗವಹಿಸಿದ್ದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಅವರು ತೆಂಕ ಗ್ರಾಪಂನಿಂದ ಆರಂಭಿಸಿ ವಿವಿಧ ಗ್ರಾಪಂಗಳ ಮುಂಭಾಗದಲ್ಲಿ ನಡೆದ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಶಿರೂರು, ಬೈಂದೂರು, ಬಿಜೂರು ಮತ್ತಿತರ ಗ್ರಾಪಂಗಳ ಮುಂದೆ ನಡೆದ ಧರಣಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳೀಯ ಕೋಟ ಗ್ರಾಪಂನಲ್ಲಿ ನಡೆದ ಧರಣಿಯಲ್ಲಿ, ಬಿಜೆಪಿ ಜಿಲ್ಲಾದ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಅವರು ಸ್ಥಳೀಯ ಕುತ್ಯಾರು ಗ್ರಾಪಂ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.............................ಎರಡು ಜಿಲ್ಲೆಯಲ್ಲಿ 40 ಸಾವಿರ ಜನರಿಂದ ಪ್ರತಿಭಟನೆ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 399 ಗ್ರಾಪಂಗಳಲ್ಲಿ ಸೋಮವಾರ ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ಧ ದೊಡ್ಡ ಮಟ್ಟದ ಜನಾಕ್ರೋಶ ವ್ಯಕ್ತವಾಗಿದೆ. ಎರಡು ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ಜನ ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಜನಸಾಮಾನ್ಯರ ಐದು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಿದ್ದೇವೆ ಎಂದು ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.