ನನ್ನ ಹಿರಿತನ, ಅನುಭವ ಬಿಜೆಪಿ ಬಳಸಿಕೊಳ್ಳಲಿಲ್ಲ

| Published : Jul 17 2024, 12:56 AM IST

ನನ್ನ ಹಿರಿತನ, ಅನುಭವ ಬಿಜೆಪಿ ಬಳಸಿಕೊಳ್ಳಲಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘ ಪರಿವಾರದವನು ಅಲ್ಲ ಎಂದು ಪಕ್ಷದಲ್ಲಿ ಇನ್ವಾಲ್ವ್‌ ಮಾಡಿಕೊಳ್ಳಲಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಬೇಸರ

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ ನನ್ನ ಹಿರಿತನ, ಅನುಭವವನ್ನು ಬಳಕೆ ಮಾಡಿಕೊಳ್ಳಲಿಲ್ಲ. ಒಬ್ಬರೂ ನನ್ನ ಏನು ಮಾಡಬೇಕೆಂದು ಕೇಳಲಿಲ್ಲ. ನನ್ನ ಕುರಿತು ನನಗೆ ತೃಪ್ತಿ ಇಲ್ಲ. ನನಗೆ ನೋವಾಗುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಸಚಿವ ಸ್ಥಾನ ಸಿಗದಿರುವುದಕ್ಕೆ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.

ನಗರದ ಸಾಯಿವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ, ನೂತನವಾಗಿ ಆಯ್ಕೆಯಾದ ಸಂಸದ ರಮೇಶ ಜಿಗಜಿಣಗಿಗೆ ಸನ್ಮಾನ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಈ ಬಾರಿ ಕೇಂದ್ರ ಮಂತ್ರಿ ಮಂಡಳ ಮಾಡುವಾಗ ರಾಜ್ಯದ ಯಾವ ಸಂಸದರೂ ನನ್ನ ಹೆಸರನ್ನು ಪ್ರಧಾನ ಮಂತ್ರಿಗಳಿಗೆ ಹೇಳಲಿಲ್ಲ. ಇದರಿಂದ ನನಗೆ ನೋವಾಗಿದ್ದು ನಿಜ. ನಾನು ಯಾವತ್ತೂ ಜೀವನದಲ್ಲಿ ಅಧಿಕಾರ, ಹಣ ಬಯಸಿಲ್ಲ. ಚುನಾವಣೆಯ ಸಂದರ್ಭದಲ್ಲಿಯೂ ಬಹಳಷ್ಟು ಸಹಿಸಿಕೊಂಡು ಬಂದಿದ್ದೇನೆ. ಬೇರೆ ಬೇರೆ ಸಮಾಜದ ಎಲ್ಲರೂ ನನ್ನನ್ನು ಪ್ರೀತಿ ಮಾಡಿದರು, ಆದರೆ ನಮ್ಮ ಜನ (ಬಿಜೆಪಿ) ನಮ್ಮನ್ನು ಪ್ರೀತಿ ಮಾಡಲ್ಲ ಎಂದು ಅಸಮಾಧಾನ ಹೊರಹಾಕಿದರು.

ನರೇಂದ್ರ ಮೋದಿಯವರು ನನ್ನ ಮೇಲೆ ವಿಶ್ವಾಸವಿಟ್ಟು ಮೂರು ವರ್ಷಗಳ ಕಾಲ ಸಚಿವನನ್ನಾಗಿ ಮಾಡಿದ್ದರು. ಅದನ್ನು ಬಿಟ್ಟು ಯಾವುದಕ್ಕೂ ನನ್ನ ಮಾತನಾಡಿಸಲಿಲ್ಲ. ಆದರೂ ನಾನು ಪಕ್ಷವನ್ನು ಬಿಟ್ಟು ಕೊಟ್ಟಿಲ್ಲ. ನನ್ನ ನಿರ್ಲಕ್ಷ್ಯ ಮಾಡಿದ್ದರಿಂದ ನನಗೆ ಹಾನಿಯಾಗಿಲ್ಲ. ಹಾನಿ ಪಕ್ಷಕ್ಕೆ ಆಗಿದೆ. ಈತ ಸಂಘ ಪರಿವಾರದವನು ಅಲ್ಲ. ಜನತಾ ಪರಿವಾರದಿಂದ ಬಂದು ಪಕ್ಷ ಸೇರಿದ್ದಾನೆ ಎಂದು ತಿಳಿದುಕೊಂಡು ಪಕ್ಷದ ಕೆಲಸ ಕಾರ್ಯದಲ್ಲಿ ಇನ್ವಾಲ್ವ್ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಯಾರ ಮೈಮೇಲೆ ಬಿದ್ದು ಅದು ಇದು ಮಾಡುತ್ತೇನೆ ಎನ್ನಲಿಲ್ಲ. ಯಾರ ಮನೆಗೂ ಹೋಗಲಿಲ್ಲ. ಯಾರ ಹಿಂದೆಯೂ ಅಲೆಯಲಿಲ್ಲ. ಜೀವನದಲ್ಲಿಯೇ ಅಂತಹ ಚಟ ನನಗೆ ಇಲ್ಲ. ನನಗೆ ಇಂತಿಂತ ಕೆಲಸ ಮಾಡು ಎಂದು ಪಕ್ಷದವರೂ ಹೇಳಲಿಲ್ಲ. ಕೆಲಸ ಕೊಡಿ ಎಂದು ನಾನೂ ಯಾರ ಬೆನ್ನು ಬೀಳಲಿಲ್ಲ. ಅವರೆಲ್ಲ ಇವನು ವಿಚಿತ್ರ ಮನುಷ್ಯ ಎಂದುಕೊಂಡರು. ನಾನು ಇರೋದೇ ಹಾಗೆ. ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ, ಕೇಳಿಲ್ಲ ಎಂದು ನೋವು ತೋಡಿಕೊಂಡರು.

ಬಿಜೆಪಿ ಸೇರಬೇಡ ಎಂದಿದ್ದರು:

ನಾನು ಬಿಜೆಪಿಗೆ ಸೇರ್ಪಡೆ ಆಗುವಾಗ ದೇಶದ ಎಲ್ಲಾ ರಾಜ್ಯದಲ್ಲಿರುವ ದಲಿತ ನಾಯಕರು ನನಗೆ ತಡೆ ಹಾಕಿದ್ದರು. ಬಿಜೆಪಿಗೆ ಸೇರಬೇಡ ಎಂದು ಫೋನ್‌ ಮಾಡಿ ಒತ್ತಡ ಹಾಕಿದ್ದರು. ಆದರೆ ನಾನು ಬಿಜೆಪಿ ಸೇರುತ್ತೇನೆ ಎಂದು ಪ್ರಮೋದ್ ಮಹಾಜನ್, ಅನಂತಕುಮಾರ್ ಹಾಗೂ ವೆಂಕಯ್ಯ ನಾಯ್ಡು ಅವರಿಗೆ ಮಾತು ಕೊಟ್ಟಿದ್ದೆ. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲರು ಇರುವವರೆಗೂ ನಾ ಎಲ್ಲಿ ಬರಲ್ಲ. ಅವರು ಇಲ್ಲದ ಬಳಿಕ ನಿಮ್ಮ ಬಳಿ ಬರುತ್ತೇನೆ ಎಂದು ಮಾತು ಕೊಟ್ಟಿದ್ದೆ. 2004ರಲ್ಲಿ ರಾಮಕೃಷ್ಣ ಹೆಗಡೆಯವರು ನಿಧನರಾದ ಬಳಿಕ ಬಿಜೆಪಿಗೆ ಸೇರ್ಪಡೆಯಾದೆ ಎಂದು ಹೇಳಿದರು.

2004ರಲ್ಲಿ ಜಗದೀಶ ಶೆಟ್ಟರ ವಿರೋಧ ಪಕ್ಷದ ನಾಯಕರಾಗಿದ್ದರು. ಅವರ ಮನೆಗೆ ಹೋಗಿ ಬಿಜೆಪಿ ಸೇರುತ್ತೇನೆ ಎಂದೆ. ಯಡಿಯೂರಪ್ಪ, ಅನಂತಕುಮಾರ ಭೇಟಿಯಾದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಬಿಜೆಪಿ ಸಂಸದನಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ ಎಂದರು.

ಬಿಜೆಪಿಯಲ್ಲೇ ನನ್ನ ರಾಜಕಾರಣ ಕೊನೆ:

ನಾನು ಚುನಾವಣೆ ಪ್ರಚಾರಕ್ಕೆ ಹೋದಾಗ ಹಳ್ಳಿ ಹಳ್ಳಿಯಲ್ಲೂ ಜನ ನನಗೆ ನೀ ಸತ್ತರೂ ನಿನ್ನ ಹೆಣಕ್ಕೆ ಓಟ್ ಹಾಕ್ತಿವಿ ಎಂದು ಹೇಳಿದ್ದರು. ನಿಮ್ಮ ಶ್ರಮ ಹಾಗೂ ಜನರ ಆಶೀರ್ವಾದದಿಂದ ನಾನು ಮತ್ತೆ ಎಂಪಿ ಆಗಿದ್ದೇನೆ. ಚುನಾವಣೆ ವೇಳೆ ನಾನು ಎಲೆಕ್ಷನ್‌ಗೆ ನಿಂತೇ ನಿಲ್ಲುತ್ತೇನೆ ಎಂದಿದ್ದೆ. ಬಿಜೆಪಿಯಲ್ಲಿ ಟಿಕೆಟ್ ಕೊಡದಿದ್ದರೆ ಪಕ್ಷ ಬಿಟ್ಟು ಹೋಗ್ತಾರೇನೋ ಎಂದುಕೊಂಡಿದ್ದರು. ಯಾರೂ ಸಂದೇಹ ಪಡಬೇಕಿಲ್ಲ. ಬಿಜೆಪಿಯಲ್ಲೇ ನನ್ನ ರಾಜಕಾರಣ ಕೊನೆಯಾಗುತ್ತದೆ. ಅಧಿಕಾರ ಇರಲಿ ಬಿಡಲಿ ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಅಷ್ಟು ಸುಲಭವಾಗಿ ನಾನು ರಾಜಕಾರಣ ಬಿಡೋದಿಲ್ಲ. ನನ್ನ ಹಣೆಬರಹ ಬಹಳ ಸ್ಟ್ರಾಂಗ್ ಇದೆ. ಬೇರೆ ಜಿಲ್ಲೆಗೆ ಹೋಗಿ, ಬೇರೆ ಪಕ್ಷಗಳಿಂದ ಯಾರಾದರೂ ಗೆದ್ದು ಬರಲಿ ನೊಡೋಣ, ಅದು ಯಾರಿಂದಲೂ ಆಗೋದಿಲ್ಲ. ನಂದೊಂದು ಗುರಿ ಇದೆ, ರಾಮಕೃಷ್ಣ ಹೆಗಡೆ ಅವರು ನನಗೆ ಮಾರ್ಗದರ್ಶನ ತೋರಿಸಿದ್ದಾರೆ. ಅದು ಆಗುವವರೆಗೂ ನಾನು ಬಿಡೋದಿಲ್ಲ, ಮುಂದೆ ಗುರಿ ಇದೆ ಹಿಂದೆ ದೇವರಿದ್ದಾನೆ ಎಂದು ಒಗಟಾಗಿ ಮಾತನಾಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ ಮಾತನಾಡಿ, ಜುಲೈ 30ರೊಳಗಾಗಿ ಎಲ್ಲಾ ಮಂಡಳಗಳು, ಕಾರ್ಯಕಾರಿಣಿ ಮುಗಿಸಬೇಕು. ಅಗತ್ಯವಿದ್ದಲ್ಲಿ ಕಾರ್ಯಕಾರಿಣಿ ಪದಾಧಿಕಾರಿಗಳ ಬದಲಾವಣೆ ಮಾಡಿ. ಕಾಂಗ್ರೆಸ್‌ನವರು ಎಸ್ಸಿ ಎಸ್ಟಿ ಜನರ ಹಣವನ್ನು ದುರುಪಯೋಗ ಮಾಡಿದ್ದಾರೆ. ಆ ಹಣ ಎಲ್ಲಿ ಹೋಗಿದೆ ಎಂಬುದು ಗೊತ್ತಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಣವನ್ನು ನೇರ ವರ್ಗಾವಣೆ ಮಾಡಿ ಕೊಳ್ಳೆ ಹೊಡೆದಿದ್ದಾರೆ. ನಾವೆಲ್ಲ ಬೆನ್ನುಹತ್ತಿ ಹೋರಾಟ ಮಾಡಿದಾಗ ಮಾತ್ರ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಇಷ್ಟಾದರೂ ಕ್ರಿಮಿನಲ್ ಕೇಸ್ ಹಾಕುತ್ತಿಲ್ಲ. ರಾಜ್ಯ ಸರ್ಕಾರ ಏನೂ ಮಾಡದ ಕಾರಣ ಇಡಿ ತನಿಖೆ ಮಾಡಬೇಕಾಯಿತು. ರಾಜ್ಯದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಮ್ಮ‌ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ್ ಸಾಸನೂರ, ರಮೇಶ ಭೂಸನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ್, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ, ಸ್ವಪ್ನಾ ಕಣಮುಚನಾಳ ಸೇರಿದಂತೆ ಎಲ್ಲ ಮಂಡಳಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

------------ವಾಲ್ಮೀಕಿ ಹಣ ಅವರಪ್ಪನ ಮನೆ ಹಣವಾ?

ಸಚಿವ ಸ್ಥಾನ ಸಿಗದ ಹಿನ್ನೆಲೆ, ವೇದಿಕೆ ಮೇಲೆ ಅಸಮಾಧಾನ ತೋಡಿಕೊಂಡ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಗಜಿಣಗಿ, ನನ್ನ ಬಿಟ್ಟುಬಿಡಿ. ಈ ವಿಷಯದ ಬಗ್ಗೆ ನನಗೆ ಏನು ಕೇಳಬೇಡಿ. ಪಕ್ಷದ ಹಿರಿಯ ನಾಯಕರು ನನಗೆ ಸಂಪರ್ಕ ಮಾಡಿದಾರೆ ಅಷ್ಟೇ ಸಾಕು. ಹೆಚ್ಚಿಗೆ ನಾನು ಏನೂ ಹೇಳೋದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಚುನಾವಣೆ ಯಾವಾಗ ಬರುತ್ತದೋ ಗೊತ್ತಿಲ್ಲ. ರಾಜ್ಯ ಸರ್ಕಾರದ ಸ್ಥಿತಿ ಹೆಬ್ಬಾವು ಸುತ್ತಿಕೊಂಡಂತೆ ಆಗಿದೆ. ಎಲ್ಲಾ ಕಡೆಯಿಂದಲೂ ಅವರನ್ನು ಸುತ್ತಿಕೊಳ್ಳುತ್ತಿದೆ. ವಾಲ್ಮೀಕಿ ಹಗರಣದ ನೂರಾರು ಕೋಟಿ ಅದು ಅವರ ಅಪ್ಪನ ಹಣವಾ? ಅದು ಬಡವರ ಹಣರೀ. ಎಸ್ಸಿ ಎಸ್ಟಿ, ಮುಸ್ಲಿಮರ ಹೀರೋಗಳು ಕಾಂಗ್ರೆಸ್ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಇವರು ಅವರದ್ದೇ ಹಣ ತಿಂದರು. ಸಿಎಂ ಸಿದ್ರಾಮಣ್ಣ ಹಿಂದುಳಿದ ವರ್ಗದ ಮನುಷ್ಯನಾಗಿ ಈ ಕೆಲಸ ಮಾಡಬೇಕಿತ್ತಾ? ಬೇರೆಯದ್ದು ತಿನ್ನಬೇಕಿತ್ತು. ನೀವು ತಪ್ಪು ಮಾಡಿಲ್ಲವಾದರೆ ಸಿಬಿಐಗೆ ಕೊಡಿ ಎಂದು ಸಿಎಂಗೆ ಸವಾಲು ಹಾಕಿದರು.

ಕಾಂಗ್ರೆಸ್‌ನಲ್ಲಿ ಹಗರಣಗಳ ಸರಮಾಲೆಯೇ ಇದೆ. ದಲಿತರು, ಅಲ್ಪಸಂಖ್ಯಾತರ ಹೀರೋಗಳು ಕಾಂಗ್ರೆಸ್‌ನವರು ಎಂದು ಹೇಳುತ್ತಾರೆ. ಆದರೆ ಅಹಿಂದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಏನು ನೈತಿಕತೆ ಇದೆ? ದಲಿತರು, ಮೈನಾರಿಟಿಗಳ ಹಣವನ್ನೂ ನುಂಗಿದ್ದಾರೆ. ನಾಚಿಕೆ ಬರಲ್ವಾ ಇವರಿಗೆ? ಸಿದ್ರಾಮಣ್ಣ ಹಿಂದೆ ಜನತಾ ಪರಿವಾರದಲ್ಲಿದ್ದ. ಈಗ ಕಾಂಗ್ರೆಸ್‌ಗೆ ಬಂದು ಅಹಿಂದ ಹೀರೋ ಆಗಿದ್ದಾರೆ. ಇವರು ಮಾಡೋದು ಸರಿಯಾ? ಜನರಿಗೆ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.