ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿಧಾನ ಪರಿಷತ್ ಸದಸ್ಯರು ಕುದುರೆ ಏರಿ ಬಂದರು, ಕೆಲ ಕಾರ್ಯಕರ್ತರು ಎತ್ತಿನ ಗಾಡಿ ಮತ್ತು ಟ್ರ್ಯಾಕ್ಟರ್ ಏರಿ ಬಂದರು, ಬೈಕ್‌ಗೆ ಹಗ್ಗ ಕಟ್ಟಿಕೊಂಡು ಎಳೆದುಕೊಂಡು ತಂದರು, ಶವಸಂಸ್ಕಾರಕ್ಕೆ ಬಳಸುವ ಮಡಿಕೆಯಲ್ಲಿ ಅಗ್ನಿ ಕುಂಡವನ್ನ ಹಿಡಿದು ಬಂದರು.ಇದು ಸೋಮವಾರ ಸೀನಪ್ಪ ವೃತ್ತ (ಗೋಪಿವೃತ್ತ)ದಲ್ಲಿ ಬಿಜೆಪಿ ವಿವಿಧ ಮೋರ್ಚಾ ಹಾಗೂ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಂಡು ಬಂದ ದೃಶ್ಯ.
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಗೋಪಿ ವೃತ್ತದಲ್ಲಿ ತರಕಾರಿ ಚೀಲ ತಂದು ಪ್ರತಿಭಟನೆ ನಡೆಸಿದರು. ಟೊಮೇಟೊ ಕೆ.ಜಿಗೆ ₹80, ಕಡಲೆಕಾಳು ಕೆ.ಜಿಗೆ ₹80, ಮೂಲಂಗಿ ಕೆ.ಜಿಗೆ ₹100 ಎಂದು ತರಕಾರಿ ಮೂಟೆ ಮೇಲೆ ದರ ಪಟ್ಟಿ ಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದರು. ಜೈಲ್ ರಸ್ತೆಯಲ್ಲಿ ಯುವ ಮೋರ್ಚಾದ ಕಾರ್ಯಕರ್ತರು ಕಾರನ್ನು ತಳ್ಳಿ ಕೊಂಡು ಬಂದರು. ಮಾರುತಿ 800 ಕಾರಿನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅಣಕು ವೇಷ ಹಾಕಿಕೊಂಡು ಕಾರ್ಯಕರ್ತರು ಪ್ರತಿಭಟಸಿದರು. ಈ ವೇಳೆ ಸಿಎಂ ಸುಳ್ಳ, ಡಿಸಿಎಂ ಕಳ್ಳ, ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ ಎಂಬ ಘೋಷಣೆಯನ್ನು ಕಾರ್ಯಕರ್ತರು ಕೂಗಿದರು.ಬರಪರಿಹಾರ ನೀಡಿಲ್ಲ ಎಂದು ರೈತ ಮೋರ್ಚದ ಕಾರ್ಯಕರ್ತರು ಮಥುರಾ ಪ್ಯಾರಡೈಸ್‌ನಿಂದ ಎತ್ತಿನ ಗಾಡಿ ಮತ್ತು ಟ್ರ್ಯಾಕ್ಟರ್ ಮೂಲಕ ಬಂದರೆ, ಒಬಿಸಿ ಮೋರ್ಚಾದ ಕಾರ್ಯಕರ್ತರು ಕಸ್ತೂರ ಬಾ ಕಾಲೇಜಿನ ರಸ್ತೆಯಿಂದ ಬೈಕ್‌ಗೆ ಹಗ್ಗ ಕಟ್ಟಿಕೊಂಡು ಎಳೆದುಕೊಂಡು ತಂದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಕುದುರೆ ಏರಿ ಕಿವಿಯಲ್ಲಿ ಹೂವು ಮತ್ತು ಕೈಯಲ್ಲಿ ಚಿಪ್ಪು ಹಿಡಿದು ಬಂದರೆ, ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ಶವಸಂಸ್ಕಾರಕ್ಕೆ ಬಳಸುವ ಮಡಿಕೆಯಲ್ಲಿ ಅಗ್ನಿ ಕುಂಡವನ್ನ ಹಿಡಿದು ಗೋಪಿವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾದರು.
ನೆಹರೂ ರಸ್ತೆಯಲ್ಲಿ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಟಿ.ಡಿ ಮೇಘರಾಜ್ ಮತ್ತು ಶಾಸಕ ಎಸ್.ಎನ್.ಚನ್ನಬಸಪ್ಪ, ದ್ವಿಚಕ್ರ ವಾಹನವನ್ನು ಚಟ್ಟದಲ್ಲಿ ಕಟ್ಟಿಕೊಂಡು ಬಂದರು. ಈ ಎಲ್ಲಾ ಘಟಕದ ಕಾರ್ಯಕರ್ತರು ಗೋಪಿ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದರು.ಪ್ರಮುಖರಾದ ಎಸ್.ರುದ್ರೇಗೌಡ, ಎಂ.ಬಿ.ಭಾನುಪ್ರಕಾಶ್, ಶಿವರಾಜ್, ಎಸ್. ದತ್ತಾತ್ರಿ. ಪ್ರಶಾಂತ್ ಕುಕ್ಕೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ರೈತಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ ಸೇರಿದಂತೆ ಹಲವರು ಕಾರ್ಯಕರ್ತರು ಇದ್ದರು.
ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಇದರಿಂದ, ಕಾಂಗ್ರೆಸ್ ಸರ್ಕಾರ ದೂಳಿಪಟವಾಗುತ್ತಿದೆ. ಉಚಿತದ ಹೆಸರಿನಲ್ಲಿ ಮುಗ್ಧ ಜನರಿಗೆ ಮೋಸ ಮಾಡಿದೆ. ಜನ ಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಆರಂಭಿಸಿದೆ. ಅದೇ ರೀತಿ, ನಗರದಲ್ಲಿ ಸಂಚಾರ ನಿಯಂತ್ರಣ ಪೊಲೀಸರು ಜನರಿಂದ ಹಣ ವಸೂಲಿಗೆ ಇಳಿದಿದ್ದಾರೆ. ಇದೂ ಕೂಡ ರಾಜ್ಯ ಸರ್ಕಾರದ ನಿರ್ದೇಶನ. ಇದರಿಂದ, ನಾಗರೀಕರಿಗೆ ಸರ್ಕಾರ ದ್ರೋಹ ಮಾಡುತ್ತಿದೆ. ಆದ್ದರಿಂದ, ಕೂಡಲೇ ಈ ರೀತಿ ಧೋರಣೆಯನ್ನು ಸರ್ಕಾರ ನಿಲ್ಲಿಸಬೇಕು. ಬೆಲೆ ಏರಿಕೆಯ ಹೊರೆ ತಗ್ಗಿಸಬೇಕು. ಇಲ್ಲವಾದರೆ, ಮುಂದಿನ ದಿನದಲ್ಲಿ ದೊಟ್ಟ ಮಟ್ಟದ ಹೋರಾಟ ನಡೆಸಲಾಗುವುದು.ಎಸ್.ಎನ್.ಚನ್ನಬಸಪ್ಪ, ಶಾಸಕರು.