ಹಾವೇರಿ: ಬಿಜೆಪಿ ಜಿಲ್ಲಾಧ್ಯಕ್ಷರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ. ಒಂದು ವಾರದೊಳಗೆ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಹಾವೇರಿ ಅಂಜುಮನ್ ಎ ಇಸ್ಲಾಂ ಕಮಿಟಿಯ ಇರ್ಫಾನ್‌ಖಾನ್ ಪಠಾಣ್ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಸೇರಿದಂತೆ ಜಿಲ್ಲೆಯಲ್ಲಿ ಹಿಂದೂ-ಮುಸಲ್ಮಾನ ಬಾಂಧವರು ಭಾವೈಕ್ಯತೆಯಿಂದ ಇದ್ದಾರೆ. ಯಾವುದೇ ಹಬ್ಬ ಹರಿದಿನಗಳು ಬಂದರೂ ಎಲ್ಲ ಸಮಾಜದವರು ಒಟ್ಟೊಟ್ಟಿಗೆ ಹಬ್ಬ ಆಚರಣೆಗಳನ್ನು ಮಾಡುತ್ತಾರೆ. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರು ಫೆ. 11ರಂದು ಅಂಜುಮನ್ ಕಮಿಟಿ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೊಲೆಗಾರರು, ಸುಳ್ಳರು, ಮೋಸಗಾರರು ಎಂದು ಮುಸ್ಲಿಂ ಸಮಾಜವನ್ನು ಟಾರ್ಗೆಟ್ ಮಾಡಿ ನಿಂದಿಸಿರುವುದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.ಅಂಜುಮನ್ ಕಮಿಟಿ ಮತ್ತೋರ್ವ ಸದಸ್ಯ ಜಮೀರ್ ಜಿಗರಿ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿರುವಂತಹ ಸುಳ್ಳರು, ಕಳ್ಳರು, ಮೋಸಗಾರರು ನಮ್ಮಲ್ಲಿ ಯಾರೂ ಇಲ್ಲ. ಅಂಥವರು ಯಾರಾದರೂ ಇದ್ದರೆ ಒಂದು ವಾರದೊಳಗೆ ದಾಖಲೆ ಸಮೇತ ಸಾಬೀತು ಪಡಿಸಬೇಕು. ಸಾಬೀತು ಮಾಡಿದರೆ ಅವರು ಹೇಳಿದಂತೆ ನಾವು ಕೇಳುತ್ತೇವೆ. ಇಲ್ಲದಿದ್ದರೆ ಸಮಾಜದ ಕ್ಷಮೆ ಯಾಚಿಸಬೇಕು ಎಂದರು.
ಅಂಜುಮನ್ ಕಮಿಟಿ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆ ಮತ್ತೆ ನಡೆಯುವ ಚುನಾವಣೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಲು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲು ಹೋದಾಗ ನಮ್ಮನ್ನು ಠಾಣೆಯಲ್ಲಿ ಗೌರವಿಸಲಾಗಿತ್ತು. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷರು ಪೂರ್ವಾಪರ ಯೋಚಿಸಿದೆ ಸಮುದಾಯವನ್ನು ಟಾರ್ಗೆಟ್ ಮಾಡಿ ನಿಂದಿಸಿರುವುದು ಸರಿಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಕಮಿಟಿ ಸದಸ್ಯರಾದ ಮುಜಾಫರ ಕೊಟ್ಟಿಗೇರಿ, ಚಮನಶರೀಫ ಮುಲ್ಲಾ, ಅನ್ವರ ಕಡೇಮನಿ, ವಾಸೀಂ ಸನ್ನುಖಾನವರ, ಹಜರತ್‌ಅಲಿ ತಹಸೀಲ್ದಾರ, ಖಾಸೀಂಸಾಬ ಅಗಡಿ, ಸಾಧಿಕ ಸವಣೂರ, ಹಸನರಜಾಕ ಅತ್ತಾರ, ಬಾಬುಲಾಲ್ ಬಾಲೇಬಾಯಿ, ಖಮರ್‌ಅಲಿ ಕಲ್ಯಾಣಿ, ಗೌಸ್ ಹತ್ತಿಕಾಳ, ಐಸ್ಪಾಕ ಹಸನ್‌ವಾಲೆ ಇದ್ದರು.22 ಸದಸ್ಯರ ಬಹುಮತ
ಫೆ. 15ರಂದು ನಡೆದ ಚುನಾವಣೆಯಲ್ಲಿ ಒಟ್ಟು 33 ಸ್ಥಾನಗಳಿಗೆ 77 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ತಂಜೀಮ್ ಅವಾಜ್ ಎ ಹಕ್ ತಂಡದ 22 ಜನ, ಅಲ್ ಕಲಮ್ ತಂಡದ 10 ಸೇರಿ 33 ಜನ ಗೆಲುವು ಸಾಧಿಸಿದ್ದಾರೆ. ತಂಜೀಮ್ ಅವಾಜ್ ಹಕ್ ತಂಡಕ್ಕೆ ಸ್ಪಷ್ಟ ಬಹುಮತ ಇದ್ದು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದರು.