ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಅಂದು ಬ್ರಿಟಿಷರು ಭಾರತವನ್ನು ಒಡೆದು ಆಳುವ ನೀತಿಯ ಮೂಲಕ ಆಡಳಿತ ನಡೆಸುತಿದ್ದರು. ಅಂದು ಬಿಜೆಪಿಯವರು ಅದೇ ನೀತಿ ಅನುಸರಿಸುತಿದ್ದಾರೆ. ದೇಶವನ್ನು ಜಾತಿ ಧರ್ಮದ ಮೂಲಕ ಒಡೆದು ಆಡಳಿತ ನಡೆಸುತಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ನ ನೂತ ಅಧ್ಯಕ್ಷೆ ಸೌಮ್ಯ ರೆಡ್ಡಿ ಆರೋಪಿಸಿದ್ದಾರೆ.ಶುಕ್ರವಾರ, ಪ್ರಥಮ ಬಾರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ, ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯವರು ಅಚ್ಛೆ ದಿನ್ ಬಂದಿದೆ ಎನ್ನುತ್ತಿದ್ದಾರೆ, ಆದರೆ ಅಚ್ಛೆ ದಿನ್ ಕೇವಲ ಅದಾನಿ ಅಂಬಾನಿಗೆ ಮಾತ್ರ ಬಂದಿದೆ. ಜನಸಾಮಾನ್ಯರಿಗೆ ಬಂದಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಗ್ಯಾಸ್, ಡೀಸೆಲ್, ಪೆಟ್ರೋಲ್, ಚಿನ್ನ, ಮೊಬೈಲ್ ಎಲ್ಲದರ ಬೆಲೆ ಏರಿಸಿ ಮುಖ್ಯವಾಗಿ ಮನೆಯನ್ನು ನಡೆಸುವ ಮಹಿಳೆಯರ ಬದುಕನ್ನೇ ನಾಶ ಮಾಡಿದೆ ಎಂದರು.ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ, ಸ್ವಾಭಿಮಾನಿ ಬದುಕನ್ನು ನೀಡುವುದಕ್ಕಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಸ್ತ್ರೀಶಕ್ತಿ ಯೋಜನೆಯಡಿ ನೀಡುವ 2 ಸಾವಿರ ರು.ಗಳಿಂದ ಕುಟುಂಬದ ಆರೋಗ್ಯ, ಮಕ್ಕಳ ಶಿಕ್ಷಣ, ಸ್ವದ್ಯೋಗ ಸಾಧ್ಯವಾಗಿದೆ ಎಂದರು.
ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡುವುದಕ್ಕಾಗಿ ಕಾಂಗ್ರೆಸ್ ಶೇ 50 ಮೀಸಲಾತಿ ನೀಡಿದೆ. ಆದರೆ ಬಿಜೆಪಿಗೆ ಮಹಿಳೆಯರ ಕಾಳಜಿಯೇ ಇಲ್ಲ. ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮುಂದಿನ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಶೇ 50 ಮಂದಿ ಸ್ಪರ್ಧಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 - 60 ಸಾವಿರ ಮಂದಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿದ್ದಾರೆ, ಅವರನ್ನು ಮಹಿಳಾ ಕಾರ್ಯಕರ್ತರು ಭೇಟಿಯಾಗಬೇಕು ಎಂದು ಕರೆ ನೀಡಿದರು.
ವಿವಿಧ ಸಂಘಟನೆ, ಸರ್ಕಾರಿ ಮಂಡಳಿ, ಸಮಿತಿಗಳಲ್ಲಿ ಸದಸ್ಯರಾಗಿ ನೇಮಕವಾದ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪಕ್ಷದ ನಾಯಕರಾದ ಎಂ.ಎ.ಗಪೂರ್, ರಮೇಶ್ ಕಾಂಚನ್, ಫಾದರ್ ವಿಲಿಯಂ ಮಾರ್ಟೀಸ್, ವೆರೋನಿಕಾ ಕರ್ನೇಲಿಯೋ, ಮಹಿಳಾ ಕಾಂಗ್ರೆಸ್ ಉಸ್ತುವಾರಿ ಚಂದ್ರಕಲಾ ಮಂಗಳೂರು ಮತ್ತಿತರರು ಇದ್ದರು. ಡಾ. ಸುನಿತಾ ಶೆಟ್ಟಿ ನಿರೂಪಿಸಿದರು.