ಸಾರಾಂಶ
- ನನ್ನ ಯಾರೂ ಸಂಪರ್ಕಿಸಿಲ್ಲ, ಕಾಂಗ್ರೆಸ್ ತೊರೆಯೋ ಪ್ರಶ್ನೆಯೇ ಇಲ್ಲ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡುವ ಕೆಪಾಸಿಟಿ ಬಿಜೆಪಿಯವರಿಗೆ ಇಲ್ಲ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ವಿ. ಬಸವರಾಜ ವ್ಯಂಗ್ಯವಾಡಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಳಿ ಈವರೆಗೆ ಯಾರು ಸಹ ಬಂದಿಲ್ಲ. ನನಗೆ ₹50 ಕೋಟಿಗಳ ಆಫರ್ ಸಹ ಬಿಜೆಪಿಯವರಿಂದ ಬಂದಿಲ್ಲ. ಹಾಗಾಗಿ, ನಾನು ಅಂತಹ ವಿಚಾರದ ಬಗ್ಗೆ ಮಾತನಾಡಲ್ಲ ಎಂದರು.
ಒಂದುವೇಳೆ ಆಫಾರ್ ಬಂದರೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನನಗೆ ಟಿಕೆಟ್ ಕೊಟ್ಟಿರುವುದು ಕಾಂಗ್ರೆಸ್. ನಾನು ಚುನಾವಣೆ ಜೀವನದಲ್ಲಿದ್ದರೂ, ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ನಾನು ನನ್ನ ಪಕ್ಷದ ಶಿಸ್ತಿನ ಸಿಪಾಯಿ ಎಂದು ಸ್ಪಷ್ಟಪಡಿಸಿದರು.ಸ್ವತಃ ಮುಖ್ಯಮಂತ್ರಿ ಅವರೇ ಹೇಳುತ್ತಿದ್ದಾರೆಂದರೆ ಖಚಿತ ಮಾಹಿತಿ ಪಡೆದುಕೊಂಡೇ ಮಾತನಾಡುತ್ತಾರೆ. ಸಿಎಂ ಹಾಗೆಲ್ಲಾ ಸುಳ್ಳು ಹೇಳುವುದಿಲ್ಲ. ಸಿಎಂ ಹೇಳಿದ್ದ ಅದೇ ಮಾತುಗಳನ್ನು ನಮ್ಮ ಆತ್ಮೀಯ ಸ್ನೇಹಿತ, ಶಾಸಕ ರವಿ ಗಣಿಗ ಸಹ ಹೇಳಿದ್ದಾರೆಂದರೆ ಸಿಎಂ ಮಾತಿನಲ್ಲಿ ಸತ್ಯ ಇದ್ದೇ ಇರುತ್ತದೆ. ಆರೇಳು ತಿಂಗಳ ಹಿಂದೆಯೇ ರವಿ ಗಣಿಗ ಇದೇ ಮಾತನ್ನಾಡಿದ್ದಾರೆ. ರವಿ ಗಣಿಗ ಹೇಳಿದ್ದು ಸತ್ಯ ಇರುತ್ತದೆ ಎಂದರು.
ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಯವರ ಕೆಲಸ. ಬಿಜೆಪಿಯವರದ್ದು ತೋಳ, ಹೋತದ ಕಥೆಯಾಗಿದೆ. ಅದು ಬೀಳುವುದಿಲ್ಲ. ತೋಳ ತಿನ್ನೊಲ್ಲಾ ಎಂಬಂತೆ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರುತ್ತದೆ. ಐದು ವರ್ಷ ಅಷ್ಟೇ ಅಲ್ಲ, ಮುಂದಿನ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸರ್ಕಾರವೇ ಅಧಿಕಾರ ನಡೆಸಲಿದೆ ಎಂದು ತಿಳಿಸಿದರು.ವಕ್ಫ್ ಸಚಿವ ಜಮೀರ್ ಅಹಮ್ಮದ್ ಅವರ ವಿರುದ್ಧ ಶಿಸ್ತು ಕ್ರಮ ವಿಚಾರವಾಗಿ ನಾವೇನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಇದ್ದು, ಸೂಕ್ತ ಕ್ರಮ ವಹಿಸುತ್ತಾರೆ. ಜಮೀರ್ ಅಹಮ್ಮದ್ ನಾವು, ತುಂಬಾ ಆತ್ಮೀಯರು. ಜಮೀರ್‌ರ ಹೇಳಿಕೆ ಬಗ್ಗೆಯೂ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಿವಗಂಗಾ ವಿ.ಬಸವರಾಜ ಪ್ರತಿಕ್ರಿಯಿಸಿದರು.
- - - -18ಕೆಡಿವಿಜಿ: ಶಿವಗಂಗಾ ವಿ. ಬಸವರಾಜ, ಕಾಂಗ್ರೆಸ್ ಶಾಸಕ, ಚನ್ನಗಿರಿ ಕ್ಷೇತ್ರ.