ಸಾರಾಂಶ
ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ಬಿಜೆಪಿಯಲ್ಲಿ ಉಂಟಾಗಿರುವ ಬಣ ರಾಜಕಾರಣದಿಂದಾಗಿ ಜೆಡಿಎಸ್-ಬಿಜೆಪಿ ಮೈತ್ರಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಉಂಟಾಗಿರುವ ಬಣ ರಾಜಕೀಯವು ಅದು ಅವರ ಆಂತರಿಕ ವಿಚಾರ. ಆ ಪಕ್ಷದ ಹಿರಿಯ ನಾಯಕರು ಅದರ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸುತ್ತಾರೆ. ಇದರಿಂದಾಗಿ ನಮ್ಮ ಮೈತ್ರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿರೀಕ್ಷಿತ ಫಲಿತಾಂಶ:
ದೆಹಲಿಯಲ್ಲಿ ನಡೆದ ವಿಧಾಸಭಾ ಚುನಾವಣೆಯ ಫಲಿತಾಂಶ ನಿರೀಕ್ಷಿತ. ಭ್ರಷ್ಟಾಚಾರದ ವಿರುದ್ಧ ಹೋರಾಟದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು ಅಧಿಕಾರ ವಹಿಸಿಕೊಂಡ ಹತ್ತು ವರ್ಷಗಳಲ್ಲಿ ಏನನ್ನೂ ಮಾಡಲಿಲ್ಲ. ದೆಹಲಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಪರಿಹರಿಸದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ದೆಹಲಿಯ ಅಭಿವೃದ್ಧಿ ವಿಚಾರದಲ್ಲಿ ಜನತೆ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಹಾಕುಂಭಮೇಳ ಪ್ರಯಾಣ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅದು ಅವರವರ ಭಕ್ತಿ- ಭಾವಕ್ಕೆ ಬಿಟ್ಟ ವಿಷಯ. ಕುಂಭಮೇಳಕ್ಕೆ ಹೋಗುವ ವಿಚಾರಕ್ಕೆ ಯಾವುದೇ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ಸಿನಿಂದ ಅಧಿಕಾರ ದುರುಪಯೋಗ:
ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿರುವ ಜನತಾದಳದ ಆಸ್ತಿಯನ್ನು ಕಾಂಗ್ರೆಸ್ ಅಧಿಕಾರದ ದುರುಪಯೋಗ ಪಡಿಸಿಕೊಂಡು ಅನಧಿಕೃತವಾಗಿ ಕಬ್ಜಾ ಮಾಡಿಕೊಂಡಿದ್ದಾರೆ. ಸೂಕ್ತ ದಾಖಲೆಗಳ ಮೂಲಕ ಸತ್ಯಾಸತ್ಯತೆ ಏನಿದೆ ಎನ್ನುವುದನ್ನು ನೋಡಬೇಕು. ಈ ಸಂಬಂಧ ದಾಖಲೆ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.