ಸಾರಾಂಶ
ಬೆಂಗಳೂರು : ರಾಜ್ಯದ ಹಲವೆಡೆ ಅತಿವೃಷ್ಟಿ, ನೆರೆ ಹಾವಳಿ ಉಂಟಾಗಿರುವ ಸಂದರ್ಭದಲ್ಲಿ ‘ಮೈಸೂರು ಚಲೋ’ ಹಮ್ಮಿಕೊಂಡರೆ ಸಾರ್ವಜನಿಕರ ಟೀಕೆ ಎದುರಿಸಬೇಕಾದೀತು ಎಂಬ ಹಿಂಜರಿಕೆಯಿಂದ ಪ್ರತಿಪಕ್ಷ ಬಿಜೆಪಿಯು ದಿಢೀರನೆ ನೆರೆಪೀಡಿತ ಪ್ರದೇಶಕ್ಕೆ ಪರಿಶೀಲನಾ ಪ್ರವಾಸ ಹಮ್ಮಿಕೊಳ್ಳಲು ತಂಡಗಳನ್ನು ರಚಿಸಿದೆ.ಬರುವ ಶನಿವಾರದಿಂದ ಬಿಜೆಪಿಯು ಜೆಡಿಎಸ್ ಜತೆಗೂಡಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಸೋಮವಾರ ಯಾತ್ರೆ ಕುರಿತ ಪೂರ್ವಸಿದ್ಧತಾ ಸಭೆಗೂ ಮೊದಲೇ ಹಿರಿಯ ಮುಖಂಡರ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ್ ಬೆಲ್ಲದ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಆರಗ ಜ್ಞಾನೇಂದ್ರ ನೇತೃತ್ವದ ಆರು ತಂಡಗಳು ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ರಾಜ್ಯದ ವಿವಿಧ ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿವೆ.
ಈ ತಂಡಗಳ ಮುಖಂಡರು ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ರಾಯಚೂರು ಮತ್ತಿತರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಮಳೆ ಮತ್ತು ನೆರೆಯಿಂದ ಆಯಾ ಜಿಲ್ಲೆಗಳಲ್ಲಿ ಏನು ಹಾನಿಯಾಗಿದೆ, ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ, ಯಾವ ರೀತಿಯ ತೊಂದರೆಯಾಗಿದೆ, ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರೆಯೋ ಅಥವಾ ಇಲ್ಲವೋ, ಅಧಿಕಾರಿಗಳು ಸಮರ್ಪಕವಾಗಿ ಪರಿಹಾರ ಕಾರ್ಯ ಮಾಡುತ್ತಿದ್ದಾರೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
;Resize=(128,128))
;Resize=(128,128))
;Resize=(128,128))
;Resize=(128,128))