ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಜೆ.ಪಿ. ಹೆಗ್ಡೆ

| Published : Apr 13 2024, 01:03 AM IST

ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಜೆ.ಪಿ. ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮ ಕೆಲಸ ಮಾಡುವುದಕ್ಕಾಗಿಯೇ ನನ್ನನ್ನು ಗೆಲ್ಲಿಸಿ, ನೀವು ಗೆಲ್ಲಿಸಿದ ಮೇಲೆ ಕೆಲಸ ಮಾಡುವ ಜವಾಬ್ದಾರಿ ನನ್ನದು, ಮಾಡದಿದ್ದರೆ ಕೇಳುವ ಹಕ್ಕು ನಿಮಗಿದೆ ಎಂದು ಜೆಪಿ ಹೆಗ್ಸೆ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲಕ್ಕೆ ಬೆಲೆ ಕಡಿಮೆಯಾಗಿದೆ, ಆದರೆ ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಕಡಿಮೆ ಮಾಡಿಲ್ಲ? ವರ್ಷಕ್ಕೆ 2 ಕೋಟಿ, 10 ವರ್ಷಕ್ಕೆ 20 ಕೋಟಿ ಉದ್ಯೋಗ ನೀಡುವ ಭರವಸೆ ಯಾಕೆ ಈಡೇರಿಸಿಲ್ಲ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರ್ಕಾರ ಆಡಿದಂತೆ ನಡೆದುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಶುಕ್ರವಾರ ಚಿಕ್ಕಮಗಳೂರಿನ ವಿವಿಧ ಕಡೆಗಳಲ್ಲಿ ಮತಪ್ರಚಾರ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಚುನಾವಣೆಗೆ ಮೊದಲು ನೀಡಿನ 5 ಗ್ಯಾರಂಟಿಗಳ ಭರವಸೆಯನ್ನು ಈಡೇರಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರು., 2 ಲಕ್ಷ ರು.ವರೆಗೆ ಸಾಲ ಮನ್ನಾ, ನಿರುದ್ಯೋಗಿ ಯುವಕರಿಗೆ 1 ಲಕ್ಷ ರು. ವೇತನ ಇತ್ಯಾದಿ ಭರವಸೆಗಳನ್ನು ನೀಡಿದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಗ್ಯಾರಂಟಿಯನ್ನು ನಾನು ನೀಡುತ್ತೇನೆ ಎಂದರು.

ನಿಮ್ಮ ಕೆಲಸ ಮಾಡುವುದಕ್ಕಾಗಿಯೇ ನನ್ನನ್ನು ಗೆಲ್ಲಿಸಿ, ನೀವು ಗೆಲ್ಲಿಸಿದ ಮೇಲೆ ಕೆಲಸ ಮಾಡುವ ಜವಾಬ್ದಾರಿ ನನ್ನದು, ಮಾಡದಿದ್ದರೆ ಕೇಳುವ ಹಕ್ಕು ನಿಮಗಿದೆ ಎಂದವರು ಹೇಳಿದರು.

ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣ ಹೋಬಳಿಯ ಬೆಳವಾಡಿ, ಸಿಂದಿಗೆರೆ, ಕುರುಬರಬೂದಿಹಾಳ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.

ಈ ಸಂದರ್ಭ ಶಾಸಕ ತಮ್ಮಯ್ಯ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಗಾಯತ್ರಿ ಶಾಂತೆ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಖರಾಯಪಟ್ಟಣ ಹೋಬಳಿ ಕಾಂಗ್ರೆಸ್‌ನ ಎಲ್ಲ ಘಟಕದ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.* ಕಣಜಾರಿನಲ್ಲಿ ಮತಯಾಚನೆ

ಗುರುವಾರ ಜಯಪ್ರಕಾಶ್‌ ಹೆಗ್ಡೆ ಅವರು ಕಾರ್ಕಳ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮನಿಯಾಲು ಅವರ ನೇತೃತ್ವದಲ್ಲಿ ಕಣಜಾರು ವ್ಯಾಪ್ತಿಯ ಗೊಡಂಬಿ ಪ್ಯಾಕ್ಟರಿಯ ಕಾರ್ಮಿಕರನ್ನು ಭೇಟಿ ಮಾಡಿ ಮತ ಯಾಚನೆ ನಡೆಸಿದರು.

ಈ ಸಂದರ್ಭ ಸ್ಥಳೀಯ ಬ್ಲಾಕ್‌ ಕಾಂಗ್ರೆಸ್ ಪ್ರಮುಖರಾದ ಸುಭಿತ್, ವಿಜ್ಞೇಶ್ ಕಿಣಿ, ಡಿ.ಆರ್. ರಾಜಣ್ಣ, ಸದಾಶಿವ ದೇವಾಡಿಗ, ಸುಭೂದ್ ಹಾಗೂ ಇತರೆ ಮುಂಚೂಣಿ ಘಟಕದ ಅಧ್ಯಕ್ಷರು, ಸದಸ್ಯರು, ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.