ಕನ್ನಡಪ್ರಭ ವಾರ್ತೆ ಶಿರಾ ದೇಶದಲ್ಲಿ ಸುಮಾರು ೧೫ ಕೋಟಿ ಬಿಜೆಪಿ ಕಾರ್ಯಕರ್ತರು ಇದ್ದು, ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವುದು ನಮ್ಮ ಮೂಲ ಉದ್ದೇಶ. ಪಕ್ಷಕ್ಕೆ ಕಾರ್ಯಕರ್ತರೇ ಶಾಶ್ವತ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಸಂಘಟನೆ ಅಧ್ಯಕ್ಷ ಚಿದಾನಂದ್ ಎಂ.ಗೌಡ ಹೇಳಿದರು. ನಗರದ ಸೇವಾ ಸದನದಲ್ಲಿ ಸೋಮವಾರ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷದ ೪೬ ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಎಂದರೆ ದೇಶಭಕ್ತಿ ಅಖಂಡ ಭಾರತ ಹಾಗೂ ವಸುದೈವ ಕುಟುಂಬಕಂ ಎನ್ನುವ ಪಕ್ಷದಲ್ಲಿ ನಾವೆಲ್ಲರೂ ಇರುವುದೇ ನಮ್ಮ ಪುಣ್ಯ ಎಂದ ಅವರು ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷಕ್ಕೆ ಕರ್ನಾಟಕ ಹೆಬ್ಬಾಗಿಲು ಆಗಿದೆ ಎಂದರು. ನರೇಂದ್ರ ಮೋದಿಯವರು ೨೦೧೪ ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಹಲವಾರು ಬದಲಾವಣೆ ತಂದಿದ್ದಾರೆ. ಗೃಹಿಣಿಯರು ನೀರಿಗಾಗಿ ತೊಂದರೆ ಅನುಭವಿಸದಂತೆ ಮನೆ ಮನೆಗೆ ನಲ್ಲಿ ಹಾಕಿಸಿದ್ದಾರೆ. ಉಜ್ವಲ್ ಯೋಜನೆ ಮುಖಾಂತರ ಉಚಿತವಾಗಿ ಗ್ಯಾಸ್ ಸಂಪರ್ಕ ಕೊಟ್ಟಿದ್ದಾರೆ. ಇದರಿಂದ ಮಹಿಳೆಯರು ಹೊಗೆ ರಹಿತವಾಗಿ ಅಡುಗೆ ಮಾಡುತ್ತಿದ್ದಾರೆ. ರೈತರಿಗೆ ಪಿಎಂ ಕಿಸಾನ್ ಯೋಜನೆ ಮೂಲಕ ೬೦೦೦ ರು.ಗಳ ಹಣ ನೀಡುತ್ತಿದ್ದಾರೆ. ಎಲ್ಲರಿಗೂ ೫ ಲಕ್ಷ ರು.ಗಳವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಒದಗಿಸುತ್ತಿದ್ದಾರೆ. ಯುವಕರಿಗೆ ಉದ್ಯಮ ಸ್ಥಾಪಿಸಲು ಸಹಾಯಧನ ನೀಡುತ್ತಿದ್ದಾರೆ. ಭಾರತ ಈಗ ಜಪಾನ್ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಮುಂದೊಂದು ದಿನ ಆರ್ಥಿಕತೆಯಲ್ಲಿ 2-3ನೇ ಸ್ಥಾನಕ್ಕೆ ಹೋಗಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಅಧ್ಯಕ್ಷ ಈರಣ್ಣ ಪಟೇಲ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಬಿಜೆಪಿ ಮಧುಗಿರಿ ಸಂಘಟನಾತ್ಮ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಕುಮಾರ್ ಮಾಸ್ಟರ್, ಓಬಿಸಿ ಅಧ್ಯಕ್ಷ ಮಾಗೋಡು ಪ್ರತಾಪ್, ಮಹಿಳಾ ಘಟಕದ ಅಧ್ಯಕ್ಷೆ ಉಮಾ ವಿಜಯರಾಜ್, ಎಸ್.ಟಿ. ಮೋರ್ಚಾ ಅಧ್ಯಕ್ಷ ತೇಜೇಶ್ವರ, ತಾಲೂಕು ಘಟಕದ ರತ್ನಮ್ಮ, ಪದ್ಮ ಮಂಜುನಾಥ್, ನಗರ ಯುವ ಮೋರ್ಚಾ ಅಧ್ಯಕ್ಷ ಶಿವು ಸ್ನೇಹಪ್ರಿಯ, ಮುಖಂಡರಾದ ಮದ್ದಕ್ಕನಹಳ್ಳಿ ರಂಗನಾಥ್, ಬರಗೂರು ಶಿವಕುಮಾರ್, ಬರಗೂರು ಸಿದ್ದಪ್ಪ, ಮದ್ದೆವಳ್ಳಿ ರಾಮಕೃಷ್ಣ, ಸುರೇಶ್, ಬೊಪ್ಪರಾಯಪ್ಪ, ಡಿ.ಎಚ್.ಗೌಡ, ಶಿವಲಿಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು.
ಬಾಕ್ಸ್..ಪುನಃ ಹಿಂದಿ ಭಾಷೆಯನ್ನು ಜಾರಿಗೆ
ಮುಖಂಡ ಡಾ.ಬಿ.ಗೋವಿಂದಪ್ಪ ಮಾತನಾಡಿ ಹಿಂದಿ ಭಾಷೆಯನ್ನು ನಾವು ಚಿಕ್ಕಂದಿನಿಂದಲೇ ದೇಶದ ಸಂಪರ್ಕ ಭಾಷೆ ಎಂದು ಒಪ್ಪಿಕೊಂಡಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ಹಿಂದಿ ಭಾಷೆಯನ್ನು ತೆಗೆದು ದ್ವಿಭಾಷಾ ನೀತಿ ಮಾಡಿರುವುದು ಖಂಡನೀಯ. ಹಿಂದಿ ಭಾಷೆ ಕಲಿತರೆ ನಾವು ದೇಶದ ಎಲ್ಲಾ ಕಡೆಗಳಲ್ಲೂ ಯಾವುದೇ ಭಾಷಾ ಸಮಸ್ಯೆ ಇಲ್ಲದಂತೆ ಸಂಚರಿಸಬಹುದು. ಮುಂದಿನ ಭಾರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ಪುನಃ ಹಿಂದಿ ಭಾಷೆಯನ್ನು ಜಾರಿಗೆ ತರುತ್ತೇವೆ ಎಂದರು.------------------- ------------------------------------