ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬಿಜೆಪಿಯಲ್ಲಿ ದಿನೇ ದಿನೇ ಅಸಮಾಧಾನ ಭುಗಿಲೇಳುತ್ತಲೇ ಇದೆ. ಅಲ್ಲಿ ಯಾವುದೇ ಶಿಸ್ತು ಉಳಿದಿಲ್ಲ. ಈಗ ಆ ಪಕ್ಷ ರಿಪೇರಿ ಮಾಡದಷ್ಟು ಹದಗೆಟ್ಟು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ದೆಹಲಿ ತನಕ ದೂರು ನೀಡಲು ಸಜ್ಜಾಗಿದ್ದಾರೆ ಅಂದರೆ ಏನು ಅರ್ಥ? ರಾಜ್ಯ ಬಿಜೆಪಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವಾಗ ಇಷ್ಟೊಂದು ಅಪಸ್ವರ ಬರಬಾರದು. ಈ ಹಿಂದೆ ನನಗೆ ಹಾಗೂ ಲಕ್ಷ್ಮಣ ಸವದಿಗೆ ಅನ್ಯಾಯವಾದಾಗ ಪಕ್ಷದಿಂದ ಹೊರ ಬಂದೆವು ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆಯಲು ಸಚಿವ ಸಂಪುಟದ ಒಪ್ಪಿಗೆ ವಿಚಾರಕ್ಕೆ ಉತ್ತರಿಸಿದ ಶೆಟ್ಟರ, ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಉಪಯೋಗಿಸಿದವರು ಯಾರು? ಇಂದು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಡಿ.ಕೆ. ಶಿವಕುಮಾರ್ ಮೇಲಿನ ಪ್ರಕರಣವನ್ನು ಸಿಬಿಐಗೆ ಕೊಟ್ಟವರು ಯಾರು? ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟವರು ಎಂದರು.ವಾಪಸ್ಸು ಪಡೆದರೆ ತಪ್ಪೇನು?
ಇಂದು ಕಾಂಗ್ರೆಸ್ ಸರ್ಕಾರ ಬಂದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಡಿ.ಕೆ. ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆದರೆ ತಪ್ಪೇನು? ಇದನ್ನು ನಾನು ಸ್ವಾಗತಿಸುವೆ. ಈ ಕುರಿತು ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಪಾರ್ಲಿಮೆಂಟ್ ನಲ್ಲಿ ಆದಾನಿ ವಿರುದ್ಧ ಮಾತಾಡಿದರೆ ನೋಟಿಸ್ ಕೊಡುತ್ತಾರೆ. ಯಾವ ಆಧಾರದ ಮೇಲೆ ಕೊಡುತ್ತಾರೆ ಎಂದು ಶೆಟ್ಟರ್ ಪ್ರಶ್ನಿಸಿದರು.ಯಾವುದೇ ಪ್ರಕರಣ, ದೂರು ದಾಖಲು ಮಾಡದೇ ನೋಟಿಸ್ ಕೊಡುವುದು ತಪ್ಪು. ನನಗೆ ಕಾನೂನು ಬಗ್ಗೆ ಮಾಹಿತಿಯಿದೆ ಎಂದು ಮಾತನಾಡುವೆ. ಒಬ್ಬ ವ್ಯಕ್ತಿ ಮೇಲೆ ದೂರು ದಾಖಲು ಮಾಡಿದ ನಂತರ ನೋಟಿಸ್, ವಿಚಾರಣೆ ಮಾಡಬೇಕು. ಇದು ಸರ್ವಾಧಿಕಾರಿ ಧೋರಣೆ ಎಂದರು.
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಟೀಕೆ ಮಾಡಿದರು. ಈಗ ಯಾವುದೇ ತುರ್ತು ಪರಿಸ್ಥಿತಿ ಇಲ್ಲ. ಈ ರೀತಿಯಾಗಿ ಮಾಡುವುದು ಸರಿಯೇ? ಯಾವುದೇ ಗಂಭೀರ ಸ್ವರೂಪದ ದೂರು ಇಲ್ಲದಿದ್ದರೂ ನವದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವರ್ಷಗಟ್ಟಲೇ ಒಳಗೆ ಹಾಕಿದ್ದಾರೆ ಎಂದರು.ಕಾದು ನೋಡಿ:
ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ವಿಜೇಯಂದ್ರ ಭೇಟಿ ವಿಚಾರಕ್ಕೆ ಉತ್ತರಿಸಿದ ಶೆಟ್ಟರ, ಯಾವಾಗ ಏನು ಆಗುತ್ತದೆ ಹೇಳುವುದಕ್ಕೆ ಆಗುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹೊಸದಾಗಿ ಅಧ್ಯಕ್ಷರಾಗಿದ್ದಾರೆ. ಏನೇನೋ ಸರ್ಕಸ್ ಮಾಡುತ್ತಿದ್ದಾರೆ, ಮಾಡಲಿ. ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆ ಕುರಿತು ನಾನೇ ಮಾತಾಡಿದ್ದೇನೆ. ಸ್ಥಳೀಯವಾಗಿ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದರು.ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯಂದ್ರ ಮಠ ಮಾನ್ಯಗಳಿಗೆ ಭೇಟಿ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶೆಟ್ಟರ್, ಇದೊಂದು ಪದ್ಧತಿ ಬಂದು ಬಿಟ್ಟಿದೆ. ಯಾರೋ ಒಬ್ಬರು ಜವಾಬ್ದಾರಿ ತೆಗೆದುಕೊಂಡ ನಂತರ ಮಠ ಮಾನ್ಯಗಳಿಗೆ ಭೇಟಿ ಕೊಡುವುದು. ನಂತರ ಅವರೆಲ್ಲಿರುತ್ತಾರೋ, ಮಠಮಾನ್ಯಗಳು ಎಲ್ಲಿರುತ್ತವೆಯೋ. ಮಠಗಳ ಅಭಿವೃದ್ಧಿಗೆ ಅವರ ಕೊಡುಗೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಮಠಗಳಿಗೆ ಹೋಗಿ ಶ್ರೀಗಳ ಕಾಲು ಮುಗಿದು ಬಂದರೆ ಏನೂ ಆಗಲ್ಲ ಎಂಬುದನ್ನು ವಿಜಯೇಂದ್ರ ಅರಿತುಕೊಳ್ಳಲಿ ಎಂದರು.