ಸಾರಾಂಶ
ಕುಮಟಾ ಪಟ್ಟಣದ ಪಿಕ್ಅಪ್ ನಿಲ್ದಾಣದಲ್ಲಿ ತನ್ನೆರಡು ಮಕ್ಕಳನ್ನು ನಿಲ್ಲಿಸಿ, ಅಲ್ಲಿಂದ ವನ್ನಳ್ಳಿಗೆ ತೆರಳಿ ಸಮುದ್ರಕ್ಕೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ತಾನು ಚಲಾಯಿಸಿಕೊಂಡು ಬಂದಿದ್ದ ಸ್ಕೂಟಿಯನ್ನು ಸಮುದ್ರ ತಟದಲ್ಲೇ ನಿಲ್ಲಿಸಿದ್ದು, ಅದರ ಡಿಕ್ಕಿಯಲ್ಲಿ ತನ್ನ ಚಿನ್ನದ ಆಭರಣ ಮುಂತಾದವನ್ನು ಕಳಚಿಟ್ಟು ಲಾಕ್ ಮಾಡಿರುವುದು ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಕುಮಟಾ
ಪಟ್ಟಣದ ಪಿಕ್ಅಪ್ ನಿಲ್ದಾಣದಲ್ಲಿ ತನ್ನೆರಡು ಮಕ್ಕಳನ್ನು ನಿಲ್ಲಿಸಿ, ಅಲ್ಲಿಂದ ವನ್ನಳ್ಳಿಗೆ ತೆರಳಿ ಸಮುದ್ರಕ್ಕೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಹೊನ್ನಾವರ ತಾಲೂಕಿನ ಹೆರೇಬೈಲ್ ಗ್ರಾಮದ ಗೋಣಿಬೈಲ್ ಶಾಲೆ ಸನಿಹದ ನಿವಾಸಿ, ಟೇಲರಿಂಗ್ ವೃತ್ತಿ ಮಾಡುತ್ತಿದ್ದ ನಿವೇದಿತಾ ನಾಗರಾಜ ಭಂಡಾರಿ (೩೬) ಮೃತ ಮಹಿಳೆ.ನ. ೨೪ರಂದು ಮಕ್ಕಳೊಂದಿಗೆ ಚಂದಾವರ ಸನಿಹದ ತೊರಗೋಡದ ತವರು ಮನೆಗೆ ಸ್ಕೂಟಿಯಲ್ಲಿ ಬಂದಿದ್ದಳು. ಅಲ್ಲಿಂದ ನ. ೨೫ರಂದು ಬೆಳಗ್ಗೆ ಮನೆಗೆ ಹೋಗುವುದಾಗಿ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಸ್ಕೂಟಿಯಲ್ಲಿ ಹೊರಟಿದ್ದಳು. ಆನಂತರ ಕುಮಟಾದ ಪಿಕ್‌ಅಪ್ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಇಬ್ಬರು ಗಂಡು ಮಕ್ಕಳನ್ನು ಇಳಿಸಿ, ಇಲ್ಲಿಯೇ ಗೆಳತಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರಳಿ ಬಂದಿಲ್ಲ ಎಂದು ಮೃತ ನಿವೇದಿತಾ ಭಂಡಾರಿ ತಾಯಿ ಸುಮಿತ್ರಾ ಗಜಾನನ ಭಂಡಾರಿ ಕುಮಟಾ ಠಾಣೆಗೆ ದೂರು ನೀಡಿದ್ದಾರೆ.
ಆದರೆ ಅದೇ ದಿನ ಮಹಿಳೆಯೋರ್ವಳು ವನ್ನಳ್ಳಿ ಸಮುದ್ರ ತೀರದಲ್ಲಿ ಸಮುದ್ರಕ್ಕೆ ಹಾರಿರುವುದನ್ನು ಅಲ್ಲಿನ ಲೈಫ್ ಗಾರ್ಡ್ ನೋಡಿದ್ದು, ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಅಲೆಗಳು ಜೋರಾಗಿದ್ದರಿಂದ ರಕ್ಷಣಾ ಕಾರ್ಯ ವಿಫಲವಾಗಿದೆ.ಬಳಿಕ ಸಮುದ್ರಕ್ಕೆ ಹಾರಿದವಳು ನಿವೇದಿತಾ ಭಂಡಾರಿ ಎಂದು ತಿಳಿದುಬಂದಿದ್ದು, ಅವಳು ತಾನು ಚಲಾಯಿಸಿಕೊಂಡು ಬಂದಿದ್ದ ಸ್ಕೂಟಿಯನ್ನು ಸಮುದ್ರ ತಟದಲ್ಲೇ ನಿಲ್ಲಿಸಿದ್ದು, ಅದರ ಡಿಕ್ಕಿಯಲ್ಲಿ ತನ್ನ ಚಿನ್ನದ ಆಭರಣ ಮುಂತಾದವನ್ನು ಕಳಚಿಟ್ಟು ಲಾಕ್ ಮಾಡಿರುವುದು ಪತ್ತೆಯಾಗಿದೆ.
ಮೃತಳ ಶವ ಭಾನುವಾರವೂ ಪತ್ತೆಯಾಗಿಲ್ಲ. ಶೋಧ ಕಾರ್ಯ ನಡೆದಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.