ಕೊಳ್ಳೆ ಹೊಡೆದು ಖಜಾನೆಯನ್ನೇ ಖಾಲಿ ಮಾಡಿದ ಬಿಜೆಪಿ

| Published : Dec 26 2023, 01:30 AM IST

ಕೊಳ್ಳೆ ಹೊಡೆದು ಖಜಾನೆಯನ್ನೇ ಖಾಲಿ ಮಾಡಿದ ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಕಾರ್ಯವನ್ನು ಬಿಜೆಪಿಯವರು ಮಾಡಿದ್ದಾರೆ ಎಂದು ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಂದೆ ಮಾಡಿದ ಸಾಲ ಮಕ್ಕಳು ತೀರಿಸುವ ಹಾಗೆ ಹಿಂದಿನ ಬಿಜೆಪಿ ಸರ್ಕಾರ ಮಾಡಿಟ್ಟ ಸಾಲವನ್ನು ನಮ್ಮ ಕಾಂಗ್ರೆಸ್ ಸರ್ಕಾರ ತೀರಿಸುವ ಪರಿಸ್ಥಿತಿ ಬಂದಿದೆ. ಸರ್ಕಾರದ ಯಾವುದೇ ಇಲಾಖೆಯನ್ನು ಬಿಡದೇ ಖಜಾನೆಯನ್ನೇ ಖಾಲಿ ಮಾಡಿ ಕೊಳ್ಳೆ ಹೊಡೆದು ಹೋಗಿದ್ದಾರೆ ಎಂದು ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಆರೋಪಿಸಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿನ ಗೃಹ ಕಚೇರಿಯಲ್ಲಿ ಭಾನುವಾರ ಪಕ್ಷದ ತಾಲೂಕು ಎಸ್ಸಿ, ಎಸ್ಟಿ ಘಟಕದ ನೂತನ ಅಧ್ಯಕ್ಷ ಶ್ರೀಕಾಂತ ಚಲವಾದಿ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಜೆ.ವಿಜಯಕರಗೆ ಸನ್ಮಾನಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಬಡವರ, ದೀನ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ, ರೈತರ ಪರ ಕಾಳಜಿ ಇರುವ ಪಕ್ಷ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಇದನ್ನು ಸಹಿಸದ ಬಿಜೆಪಿಯವರು ಜನರಿಗೆ ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಈ ಹಿಂದಿದ್ದ ಬಿಜೆಪಿ ಸರ್ಕಾರದಲ್ಲಿ ಅನುದಾನ ಮಂಜೂರು ಮಾಡದೇ ಬೇಕಾಬಿಟ್ಟಿ ಕಾಗದ ಪತ್ರ ತಯಾರಿಸಿ ಅವೈಜ್ಞಾನಿಕವಾಗಿ ಎಸ್ಸಿ, ಎಸ್ಟಿ ವರ್ಗದವರ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿ ಕಾಮಗಾರಿ ಕೈಗೊಂಡು ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡದೆ ಹೋಗಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪೆಟ್ಟಾಗಿದೆ. ಗುತ್ತಿಗೆದಾರರು ತೀರಾ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಂತಹಂತವಾಗಿ ಗುತ್ತಿಗೆದಾರರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ಮಾರ್ಚ್ ಬಜೆಟ್‌ನಲ್ಲಿ ರಸ್ತೆ, ಮನೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು ಎಂದರು.

ನಾನು ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ಬಸವಣ್ಣನವರ ಹೆಸರಿನಲ್ಲಿ ಹಣ, ಆಸ್ತಿ, ಅಂತಸ್ತು ಮಾಡಿಕೊಳ್ಳಲು ರಾಜಕಾರಣಕ್ಕೆ ಬಂದಿಲ್ಲ. ನನಗೆ ಯಾವುದೇ ಜಾತಿ, ಮತ, ಪಂಥ ಗೊತ್ತಿಲ್ಲ. ಮತಕ್ಷೇತ್ರದ ಎಲ್ಲ ಜಾರ್ತಿ, ಧರ್ಮದವರನ್ನೂ ಸಮಾನತೆಯಿಂದ ಗೌರವದಿಂದ ಕಂಡಿದ್ದೇನೆ. ಸುಖಾಸುಮ್ಮನೆ ನನ್ನನ್ನು ಅಂಬೇಡ್ಕರ್‌ ವಿರೋಧಿ ಎಂದು ಅಪಪ್ರಚಾರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಶಾಸಕ ನಾಡಗೌಡ ಹೇಳಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವೈ.ಎಚ್. ವಿಜಯಕರ, ವಿಜೇಂದ್ರ ಇಲಕಲ್ಲ, ಬಹಾದ್ದೂರ್‌ ರಾಠೋಡ, ಲಕ್ಷ್ಮಣ ಲಮಾಣಿ, ರಾಜೇಂದ್ರಗೌಡ ರಾಯಗೊಂಡ, ಯಲ್ಲಪ್ಪ ಚಲವಾದಿ, ಗೋಪಿ ಮಡಿವಾಳರ ಸೇರಿದಂತೆ ಹಲವರು ಇದ್ದರು.